ತಮಿಳುನಾಡಿನ ಸ್ಟರ್ಲೈಟ್ ಘಟಕ ಕಾರ್ಯಾಚರಣೆ

ಚೆನ್ನೈ, ಎ.೨೭- ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ ಎಂಬ ಸ್ಥಳೀಯರ ವಿರೋಧದಿಂದ ೨೦೧೮ರಲ್ಲಿ ಕಾರ್ಯಸ್ಥಗಿತಗೊಳಿಸಿದ್ದ ತಮಿಳುನಾಡಿನ ಸ್ಟರ್ಲೈಟ್ ತಾಮ್ರ ಕರಗಿಸುವ ಘಟಕವನ್ನು ಆಮ್ಲಜನಕ ಉತ್ಪಾದನೆಯ ಉದ್ದೇಶದಿಂದ ಭಾಗಶಃ ಕಾರ್ಯಾರಂಭಕ್ಕೆ ತಮಿಳುನಾಡು ಸರಕಾರ ಅವಕಾಶ ನೀಡಿದೆ.
ತಮಿಳುನಾಡಿನಲ್ಲಿ ಕೊರೋನ ಸೋಂಕು ಪ್ರಕರಣ ಉಲ್ಬಣಿಸಿರುವ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರ ಕೈಗೊಂಡಿದೆ. ಘಟಕದಲ್ಲಿ ತಾಮ್ರ ಉತ್ಪಾದನೆಗೆ ಅವಕಾಶವಿಲ್ಲ. ಸರಕಾರ ನೇಮಿಸಿದ ಸಮಿತಿ ಆಮ್ಲಜನಕ ಉತ್ಪಾದನೆ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸರ್ವಪಕ್ಷಗಳ ಸಭೆಯ ಬಳಿಕ ಈ ನಿರ್ಧಾರವನ್ನು ಘೋಷಿಸಲಾಗಿದೆ. ಸಭೆಯಲ್ಲಿ ಪಾಲ್ಗೊಂಡಿದ್ದ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್, ಸ್ಟರ್ಲೈಟ್ ಘಟಕದ ಕಾರ್ಯನಿರ್ವಹಣೆಯ ಬಗ್ಗೆ ನಿಗಾ ಇರಿಸಬೇಕು ಮತ್ತು ತಮಿಳುನಾಡಿಗೆ ಉಚಿತ ಆಮ್ಲಜನಕ ಪೂರೈಸುವ ಷರತ್ತು ವಿಧಿಸುವಂತೆ ಆಗ್ರಹಿಸಿದರು. ಇದೇ ಸಂದರ್ಭ ಮಾತನಾಡಿದ ಡಿಎಂಕೆ ಸಂಸದೆ ಕಣಿಮೋಳಿ, ಘಟಕದಲ್ಲಿ ಆಮ್ಲಜನಕ ಉತ್ಪಾದನೆಯ ಪ್ರಕ್ರಿಯೆಯ ಮೇಲುಸ್ತುವಾರಿ ವಹಿಸುವ ಸಮಿತಿಯಲ್ಲಿ ಸ್ಥಳೀಯರನ್ನೂ(ತಾಮ್ರ ಘಟಕವನ್ನು ವಿರೋಧಿಸಿದವರು) ಸೇರಿಸಬೇಕು ಎಂದು ಒತ್ತಾಯಿಸಿದರು. ವೇದಾಂತ ಸಂಸ್ಥೆಯ ಮಾಲಕತ್ವದಲ್ಲಿ ತಮಿಳುನಾಡಿನ ತೂತುಕುಡಿಯಲ್ಲಿರುವ ಸ್ಟರ್ಲೈಟ್ ತಾಮ್ರ ಉತ್ಪಾದನಾ ಘಟಕವನ್ನು ವಿರೋಧಿಸಿ ೨೦೧೮ರಲ್ಲಿ ಸ್ಥಳೀಯರು ನಡೆಸಿದ ಪ್ರತಿಭಟನೆಯ ಸಂದರ್ಭ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ೧೭ ಪ್ರತಿಭಟನಾಕಾರರು ಮೃತಪಟ್ಟಿದ್ದರು. ಈ ಪ್ರಕರಣದ ಸಿಬಿಐ ತನಿಖೆ ಇನ್ನೂ ಪ್ರಗತಿಯಲ್ಲಿದೆ.