ಮಧುರೈ(ತಮಿಳುನಾಡು),ಜು.27- ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ರಾಜ್ಯ ಬಿಜೆಪಿ ನಾಳೆಯಿಂದ 6 ತಿಂಗಳ ಕಾಲ ರಾಜ್ಯದ 234 ವಿಧಾನಸಭಾ ಕ್ಷೇತ್ರಗಳಲ್ಲಿ ಎನ್ ಮಣ್ಣ್, ಎನ್ ಮಕ್ಕಳ್’(ನನ್ನ ನೆಲ, ನನ್ನ ಜನ) ಪಾದಯಾತ್ರೆ ನಡೆಸಲು ನಿರ್ಧರಿಸಿದೆ.
ಪಾದಯಾತ್ರೆಗೆ ನಾಳೆ ಸಂಜೆ ರಾಮೇಶ್ವರದಲ್ಲಿ ಪಕ್ಷದ ಹಿರಿಯ ನಾಯಕ ಮತ್ತು ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಲಿದ್ದು,ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆಯು ಸಾಗಲಿದೆ.
‘ಎಲ್ಲ 39 ಲೋಕಸಭಾ ಕ್ಷೇತ್ರಗಳಲ್ಲೂ ಪಾದಯಾತ್ರೆ ನಡೆಸುವ ದೃಷ್ಟಿಯಿಂದ 5 ಹಂತಗಳಲ್ಲಿ ಆಯೋಜನೆಗೆ ನಿರ್ಧರಿಸಲಾಗಿದೆ ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ.
2024ರ ಜನವರಿ 11ರಂದು ಪಾದಯಾತ್ರೆ ಅಂತ್ಯವಾಗಲಿದೆ. ಅಮಿತ್ ಶಾ ಅವರು ಉದ್ಘಾಟನೆ ಮಾಡಿದ ಬಳಿಕ ಈ ಚುನಾವಣಾ ಪ್ರಚಾರವು ಜುಲೈ 29ರಂದು ರಾಮೇಶ್ವರದಿಂದ ಆರಂಭವಾಗಲಿದೆ’ ಎಂದು ತಿಳಿಸಿದರು.
ಅಣ್ಣಾಮಲೈ ನೇತೃತ್ವದಲ್ಲಿ ನಡೆಯಲಿರುವ ಈ ಪಾದಯಾತ್ರೆಯು 1,770 ಕಿ.ಮೀ ಸಾಗಲಿದೆ. ಗ್ರಾಮೀಣ ಪ್ರದೇಶದ ಉಳಿದ ಭಾಗಗಳಲ್ಲಿ ವಾಹನಗಳ ಮೂಲಕ ಪ್ರಚಾರ ಕಾರ್ಯ ನಡೆಯಲಿದೆ. ಈ ಪಾದಯಾತ್ರೆ ವೇಳೆ 10 ಪ್ರಮುಖ ರ್‍ಯಾಲಿಗಳು ನಡೆಯಲಿದ್ದು, ಪ್ರತಿ ರ್‍ಯಾಲಿಯಲ್ಲಿ ಒಬ್ಬರು ಕೇಂದ್ರ ಸಚಿವರು ಭಾಗಿಯಾಗಲಿದ್ದಾರೆ.
‘ನಾವು ಪ್ರಧಾನಿ ಮೋದಿಯವರ ಸಾಧನೆಗಳನ್ನು ಜನರಿಗೆ ಎತ್ತಿ ತೋರಿಸುತ್ತೇವೆ ಮತ್ತು ಮೋದಿಜಿಯವರನ್ನು ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ತರಲು ಜನರ ಬೆಂಬಲವನ್ನು ಕೋರುತ್ತೇವೆ, ಕ್ಷೇತ್ರವಾರು ಜನರ ಒಳಿತಿಗಾಗಿ ಬಿಜೆಪಿ ಏನು ಮಾಡಿದೆ ಎಂಬುದನ್ನು ನಾವು ವಿವರಿಸುತ್ತೇವೆ’ಎಂದು ಅವರು ಹೇಳಿದರು.
‘ಮೋದಿ ಏನು ಮಾಡಿದ್ದಾರೆ’ ಪುಸ್ತಕದ ಸುಮಾರು ಒಂದು ಲಕ್ಷ ಪ್ರತಿಗಳನ್ನು ಜನರಿಗೆ ಹಂಚಲಾಗುವುದು ಎಂದು ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಅಣ್ಣಾಮಲೈ ತಿಳಿಸಿದರು.
ಕೇಸರಿ ಪಕ್ಷವು ಜನರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅವರನ್ನು ಡಿಎಂಕೆ ಪ್ರಭಾವದಿಂದ ದೂರವಿಟ್ಟು ಬಿಜೆಪಿಗೆ ಹತ್ತಿರ ತರಲು ಆಶಿಸುತ್ತಿದೆ ಎಂದು ಉಪಾಧ್ಯಕ್ಷ ಡಾ. ಕರು ನಾಗರಾಜನ್ ಹೇಳಿದರು.