ತಮಿಳುನಾಡಿನಲ್ಲಿ ಆ. 31ರವರೆಗೆ ಲಾಕ್‌ಡೌನ್

ಚೆನ್ನೈ(ತಮಿಳುನಾಡು), ಜು. ೩೦- ಅಮೆರಿಕ, ಬ್ರೆಜಿಲ್ ಸೇರಿದಂತೆ ಭಾರತದಲ್ಲೂ ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಬೆನ್ನಲ್ಲೆ ತಮಿಳುನಾಡು ರಾಜ್ಯಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ಆ. 31ರವರೆಗೂ ಲಾಕ್‌ಡೌನ್‌ನ್ನು ವಿಸ್ತರಿಸಿದೆ.
ಅಮೆರಿಕದಲ್ಲಿ ಕೊರೊನಾ ಸೋಂಕು 1.50 ಲಕ್ಷ ದಾಟಿದ್ದರೆ, ಬ್ರೆಜಿಲ್‌ನಲ್ಲಿ 69 ಸಾವಿರ ಹಾಗೂ ಭಾರತದಲ್ಲಿ ಒಂದೇ ದಿನ 50 ಸಾವಿರಕ್ಕೂ ಅಧಿಕ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗುತ್ತಿರುವ ಬೆನ್ನಲ್ಲೆ ಕೊರೊನಾ ನಿಯಂತ್ರಣಕ್ಕೆ ತಮಿಳುನಾಡು ರಾಜ್ಯಸರ್ಕಾರ ಲಾಕ್‌ಡೌನ್ ವಿಸ್ತರಿಸಲು ನಿರ್ಧರಿಸಿದೆ.
3ನೇ ಹಂತದ ಕೊರೊನಾ ಲಾಕ್‌ಡೌನ್ ಸಡಿಲಗೊಳಿಸಲು ಮಾರ್ಗಸೂಚಿ ನೀಡುತ್ತಿದ್ದಂತೆಯೇ ತಮಿಳುನಾಡಿನಲ್ಲಿ ಮಾತ್ರ ಆ. 31ರ ಮಧ್ಯರಾತ್ರಿವರೆಗೂ ತಮಿಳುನಾಡು ಸರ್ಕಾರ ಲಾಕ್‌ಡೌನ್‌ನ್ನು ವಿಸ್ತರಿಸಿದೆ.
ವಾರದಲ್ಲಿ ಸಾರ್ವಜನಿಕರಿಗೆ ಅಗತ್ಯವಸ್ತುಗಳ ಖರೀದಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೆಲ ಸಮಯ ಲಾಕ್‌ಡೌನ್ ಸಡಿಲಗೊಳಿಸಲು ಉದ್ದೇಶಿಸಲಾಗಿದ್ದು, ಭಾನುವಾರದಂದು ಸಂಪೂರ್ಣ ಲಾಕ್‌ಡೌನ್‌ ಘೋಷಿಸಲಾಗಿದೆ.
ಸಾಂಕ್ರಾಮಿಕ ರೋಗವನ್ನು ನಿಗ್ರಹಿಸುವ ನಿಟ್ಟಿನಲ್ಲಿ ಲಾಕ್‌ಡೌನ್ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಈ ಹಿಂದೆ ಕೇಂದ್ರ ಸರ್ಕಾರ ಮಾರ್ಗಸೂಚಿಯನ್ವಯ ನಿರ್ಬಂಧಗಳನ್ನು ತೆಗೆದು ಹಾಕಲು ನಿರ್ಧರಿಸಲಾಗಿತ್ತು. ಆದರೆ, ಏಕಾಏಕಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಳವಾಗಿರುವ ಹಿನ್ನೆಲೆ ಆ. 31ರವರೆಗೂ ಲಾಕ್‌ಡೌನ್ ಮುಂದುವರೆಸಲು ರಾಜ್ಯಸರ್ಕಾರ ನಿರ್ಧರಿಸಿದೆ.
ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕೊರೊನಾ ಸೋಂಕು ವ್ಯಾಪಿಸಿರುವ ಹಿನ್ನೆಲೆ ಜಿಲ್ಲಾವ್ಯಾಪ್ತಿಗಳಿಗೂ ಸಹ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಇದರೊಂದಿಗೆ ತೆಲಂಗಾಣ, ಮಹಾರಾಷ್ಟ್ರ, ರಾಜಸ್ತಾನ್, ಕೊಲ್ಕತ್ತ ಸೇರಿದಂತೆ ಇನ್ನಿತರ ರಾಜ್ಯಗಳಲ್ಲೂ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್‌ನ ಕೆಲವು ವಿಷಯಗಳನ್ನು ಸಡಿಲಗೊಳಿಸಲಾಗಿದ್ದು, ಉಳಿದಂತೆ ಲಾಕ್‌ಡೌನ್ ಮುಂದುವರೆಸಲು ನಿರ್ಧರಿಸಲಾಗಿದೆ.