
ಸಂಜೆವಾಣಿ ವಾರ್ತೆ
ತಿ.ನರಸೀಪುರ: ಆ.19:- ಕಾವೇರಿ -ಕಪಿಲಾ ನದಿಗಳ ಅಚ್ಚುಕಟ್ಟು ಪ್ರದೇಶದಲ್ಲಿ ಬರದ ಛಾಯೆ ನಡುವೆಯೂ ರಾಜ್ಯ ಸರ್ಕಾರ ತಮಿಳುನಾಡು ರಾಜ್ಯಕ್ಕೆ ನೀರು ಹರಿಸಿರುವುದನ್ನು ಖಂಡಿಸಿ ತಾಲೂಕು ರೈತ ಸಂಘದ ಪದಾಧಿಕಾರಿಗಳು ನದಿಗೆ ಇಳಿದು ಪ್ರತಿಭಟನೆ ನಡೆಸಿದರು.
ಪಟ್ಟಣದ ಮಿನಿ ವಿಧಾನ ಸೌಧದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ವಿದ್ಯೋದಯ ವೃತ್ತ, ಖಾಸಗಿ ಬಸ್ ನಿಲ್ದಾಣ ಮತ್ತು ಭಗವಾನ್ ವೃತ್ತದ ಮಾರ್ಗವಾಗಿ ಗುಂಜಾನರಸಿಂಹಸ್ವಾಮಿ ದೇವಾಲಯ ತಲುಪಿ ಸಮೀಪದಲ್ಲಿರುವ ಕಪಿಲಾ ನದಿಗೆ ಇಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ನಂತರ ಮಾತನಾಡಿದ ತಾಲೂಕು ರೈತ ಸಂಘದ ಅಧ್ಯಕ್ಷ ಕರೋಹಟ್ಟಿ ಕುಮಾರಸ್ವಾಮಿ,ಸರ್ಕಾರ ಕಪಿಲಾ ಮತ್ತು ಕಾವೇರಿ ನದಿಗಳ ಅಚ್ಚುಕಟ್ಟು ಪ್ರದೇಶದ ಬೇಸಾಯಕ್ಕೆ ನಿರಂತರ ನೀರು ಬಿಡುತ್ತಿಲ್ಲ.ಅಲ್ಲದೆ ಈ ಭಾಗದ ರೈತರ ಹಿತವನ್ನು ಲೆಕ್ಕಿಸದೆ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಈ ಭಾಗದ ರೈತರಿಗೆ ಮಾಡಿದ ಮಹಾದ್ರೋಹ.ಮುಖ್ಯಮಂತ್ರಿಗಳು,ಜಲಸಂಪನ್ಮೂಲ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ಭಾಗದ ರೈತರ ಬಗ್ಗೆ ಕಾಳಜಿ ಇಲ್ಲ.ಹಾಗಾಗಿ ಏಕಾಏಕಿ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿದರು.
ಟೌನ್ ಅಧ್ಯಕ್ಷ ಈ.ರಾಜು ಮಾತನಾಡಿ, ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ರೈತರ ಹಿತ ಕಾಯಲು ಇಚ್ಚಿಸುವುದಿಲ್ಲ.ರಾಜಕೀಯ ಲಾಭ ಮತ್ತು ಹಣ ಗಳಿಸುವ ಉದ್ದೇಶದಿಂದ ರಾಜ್ಯದ ರೈತರ ಹಿತವನ್ನು ಬಲಿಕೊಡಲಾಗುತ್ತಿದೆ.ತಕ್ಷಣವೇ ತಮಿಳುನಾಡು ರಾಜ್ಯಕ್ಕೆ ಬಿಟ್ಟಿರುವ ನೀರನ್ನು ನಿಲ್ಲಿಸಿ ಕಾವೇರಿ -ಕಬಿನಿ ಜಲಾಯಶಯಗಳ ಅಚ್ಚುಕಟ್ಟು ಪ್ರದೇಶದ ರೈತರ ಬೇಸಾಯಕ್ಕೆ ನೀರು ಬಿಡಬೇಕು. ಅಲ್ಲದೆ ಬೆಂಗಳೂರು ಮತ್ತು ಮೈಸೂರು ಭಾಗದ ಜನರಿಗೆ ಕುಡಿಯುವ ಉದ್ದೇಶಕ್ಕಾಗಿ ನೀರನ್ನು ಸಂಗ್ರಹಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗೌರವ ಅಧ್ಯಕ್ಷ ಮುಡುಕನಪುರ ಮಹದೇವಸ್ವಾಮಿ, ಬನ್ನೂರು ಹೋಬಳಿ ಅಧ್ಯಕ್ಷ ಹುಚ್ಚೇಗೌಡ, ಮೂಗೂರು ಶಾಂತನಾಗರಾಜು, ಸಿದ್ದರಾಜು ಚೌಹಳ್ಳಿ, ಶಂಕರ್ ಬೂದಹಳ್ಳಿ, ಸುಜ್ಜಲೂರು ಚಂದ್ರಶೇಖರ್, ತಲಕಾಡು ಹೂವಯ್ಯ, ರಾಜಶೇಖರ್, ಚಿನ್ನಸ್ವಾಮಿ,ನಾರಾಯಣಿ ಇತರರು ಪಾಲ್ಗೊಂಡಿದ್ದರು.