ತಮಿಳುನಾಡಿಗೆ ಕಾವೇರಿ ನೀರು-ಕಪ್ಪು ಬಾವುಟ ಪ್ರದರ್ಶಿಸಿ ವಿಜಯದಶಮಿ ಆಚರಿಸಿದ ಚಳವಳಿಗಾರರು

ಮಂಡ್ಯ :- ರಾಜ್ಯದ ಕಾವೇರಿ ಜಲಾನಯನ ವ್ಯಾಪ್ತಿಯ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸದಂತೆ ಒತ್ತಾಯಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವತಿಯಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹ 50ನೇ ದಿನಕ್ಕೆ ಕಾಲಿಟ್ಟಿದ್ದು, ಕಪ್ಪು ಬಾವುಟ ಪ್ರದರ್ಶಿಸಿ ವಿಜಯದಶಮಿಯನ್ನು ಕರಾಳ ದಿನವನ್ನಾಗಿ ಹೋರಾಟಗಾರರು ಆಚರಿಸಿದರು.
ನಗರದ ಜೆ.ಸಿ. ವೃತ್ತದಲ್ಲಿ ಜಮಾಯಿಸಿದ ಚಳವಳಿಗಾರರು, ಕಪ್ಪು ಬಾವುಟ ಪ್ರದರ್ಶನ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ನಗರದ ಸರ್ ಎಂ.ವಿ. ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಜೊತೆಗೂಡಿದ ರೈತ, ದಲಿತ, ಪ್ರಗತಿಪರ ಹಾಗೂ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಧರಣಿ ಸತ್ಯಾಗ್ರಹ ಮುಂದುವರಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಮಾತನಾಡಿ, ತಮಿಳುನಾಡಿಗೆ ಕರ್ನಾಟಕದಿಂದ ನಿತ್ಯ 3000 ಕ್ಯೂಸೆಕ್ ನೀರು ಹರಿಸಲು ಸರ್ಕಾರ ನಿರ್ಣಯ ಕೈಗೊಂಡಿರುವುದು ಬೆಳಕಿಗೆ ಬಂದಿದ್ದು, ಇದನ್ನು ಕಠಿಣ ಶಬ್ಧಗಳಿಂದ ಧಿಕ್ಕರಿಸಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಸ್ಯೆ ಇಲ್ಲವೆಂಬುದು ಅಧಿಕಾರಿಗಳ ಮಾತು :
ಇತ್ತೀಚೆಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳನ್ನು ಭೇಟಿ ಮಾಡಿ ವಿಚಾರಿಸಿದೆ. ಈ ಬಗ್ಗೆ ಬಹಳ ಸಮಾಧಾನ ಚಿತ್ತರಾಗಿ ಮಾತನಾಡುತ್ತಾರೆ. ತಮಿಳುನಾಡಿಗೆ 3000 ಕ್ಯೂಸೆಕ್ ನೀರು ಹರಿಸುವ ಆದೇಶ ನಮಗೆ ಸಮಾಧಾನಕರ ಸಂಗತಿ ಎಂದಿದ್ದಾರೆ. ಎಂದರೆ, ರೈತರ ಹಿತ ರಕ್ಷಣೆಗಿಂತ ಸರ್ಕಾರ ಅಧಿಕಾರದ ರಕ್ಷಣೆ ಮಾಡಿಕೊಳ್ಳುವುದೇ ಮುಖ್ಯ ಎಂದಂತಾಯಿತು. ಆದ್ದರಿಂದ ನಾವಿದನ್ನು ಕಟು ಶಬ್ಧಗಳಿಂದ ಖಂಡಿಸುವುದಾಗಿ ಹೇಳಿದರು.
ಈಗಾಗಲೇ ಕಾವೇರಿ ಕುಟುಂಬದ ಪ್ರೊ.ಕೆ.ಸಿ.ಬಸವರಾಜು ಅವರು ತಿಳಿಸಿರುವಂತೆ ಐತೀರ್ಪಿನಲ್ಲೇ ಸಂಕಷ್ಟ ಸೂತ್ರವೂ ಇದ್ದು, ಅದರಲ್ಲಿ ಶೇ.50 ರಿಂದ 60ರಷ್ಟು ಮಳೆ ಕೊರತೆಯಾದಾಗ ಮಳೆ ನಿರಿನ ಲಭ್ಯತೆ ಆಧರಿಸಿ ಎರಡೂ ರಾಜ್ಯಗಳು ನೀರಿನ ಹಂಚಿಕೆ ಮಾಡಿಕೊಳ್ಳಬೇಕೆಂದು ಸ್ಪಷ್ಟವಾಗಿ ತಿಳಿಸಿದೆ. ಇದನ್ನು ಸರ್ಕಾರ ಮರೆಮಾಚಿದ್ದು, ತಮಿಳುನಾಡಿಗೆ ಬೇಕೆಂದಾಗಲೆಲ್ಲ ನೀರು ಹರಿಸುತ್ತಲೇ ಬಂದಿದೆ. ಹಾಗೇ ಕಾವೇರಿಕೊಳ್ಳದ ರೈತರಿಗೆ ನಿರಂತರ ಅನ್ಯಾಯ ಮಾಡುತ್ತಲೇ ಬಂದಿದೆ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾದ ಕ್ರಮದಿಂದ ನಾಟಿ ಮಾಡಲಿಲ್ಲ :
ಪ್ರಸ್ತುತ ಸನ್ನಿವೇಶದಲ್ಲಿ ತಮಿಳುನಾಡಿನಲ್ಲಿ ಸತತ ಮಳೆಯಾಗುತ್ತಿದ್ದು, ನೀರಿನ ಪ್ರಮಾಣ ಹೆಚ್ಚಾಗಿದೆ. ಆದರೆ, ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸಿದ ಸರ್ಕಾರದ ಕ್ರಮದಿಂದಾಗಿ ಈ ಭಾಗದ ರೈತರು ಹೊಸದಾಗಿ ನಾಟಿ ಮಾಡಲಾಗಿಲ್ಲ. ಬೆಳೆದು ನಿಂತಿರುವ ಬೆಳೆಯನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಿಲ್ಲ. ಇಂತಹ ನೋವಿನ ಸ್ಥಿತಿಯಲ್ಲೂ ಕೂಡ ರಾಜ್ಯ ಸರ್ಕಾರ 30ನೇ ತಾರೀಖಿನ ತನಕ 3000 ಕ್ಯೂಸೆಕ್‌ನಂತೆ ನಿತ್ಯ ನೀರು ಹರಿಸುತ್ತಲೇ ಇದೆ.