ತಮಿಳುನಾಡಿಗೆ ಕಾವೇರಿ ನೀರು: ಬೈಕ್ ಜಾಥಾ

ಸಂಜೆವಾಣಿ ವಾರ್ತೆ
ತಿ.ನರಸೀಪುರ: ಸೆ.28:- ತಮಿಳುನಾಡಿಗೆ ಕೃಷ್ಣರಾಜ ಸಾಗರ-ಕಬಿನಿ ಜಲಾಶಯಗಳಿಂದ ನಿರಂತರ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿ ರಾಜ್ಯ ರೈತ ಸಂಘದ ತಾಲೂಕು ಘಟಕ ಬೈಕ್ ಜಾಥಾ ನಡೆಸಿತು.
ಪಟ್ಟಣದ ಗುಂಜಾ ನರಸಿಂಹಸ್ವಾಮಿ ದೇವಾಲಯದಲ್ಲಿ ನೆರೆದಿದ್ದ ನೂರಾರು ರೈತ ಸಂಘದ ಮುಖಂಡರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೈಕ್ ಜಾಥಾ ನಡೆಸಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ನಂತರ ತಿ. ನರಸೀಪುರದಿಂದ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿಗೆ ಬೈಕ್ ಗಳಲ್ಲಿ ಜಾಥಾ ಹೊರಟು ಮನವಿ ಸಲ್ಲಿಸಿದರು.
ಜಾಥಾ ಉದ್ದೇಶಿಸಿ ಮಾತನಾಡಿದ ತಾಲೂಕು ರೈತ ಸಂಘದ ಅಧ್ಯಕ್ಷ ಕರೋಹಟ್ಟಿ ಕುಮಾರಸ್ವಾಮಿ,ಸರ್ಕಾರ ತಮಿಳುನಾಡಿಗೆ ಏಕಾಏಕಿ ನೀರು ಹರಿಸುತ್ತಿರುವುದನ್ನು ನಿಲ್ಲಿಸಬೇಕು.ಕಾವೇರಿ -ಕಪಿಲಾ ಅಚ್ಚುಕಟ್ಟು ಪ್ರದೇಶದ ರೈತರ ಹಿತ ಕಾಯಬೇಕು.
ಈ ಭಾಗದ ರೈತರು ಬಿತ್ತನೆ ಕಾರ್ಯ ಮುಗಿಸಿದ್ದು,ಸರ್ಕಾರ ರೈತರ ಬೇಸಾಯಕ್ಕೆ ನೀರು ಬಿಡದೆ ಇರುವುದರಿಂದ ರೈತರು ಬೆಳೆ ನಷ್ಟ ಅನುಭವಿಸಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ರೈತರ ಬೆಳೆ ನಷ್ಟದ ಹೊಣೆ ಹೊರಬೇಕು.ತಕ್ಷಣ ಪರಿಹಾರ ಘೋಷಣೆ ಮಾಡಬೇಕು ಎಂದು ಅಗ್ರಹಿಸಿದರು.
ರಾಜ್ಯ ಸರ್ಕಾರ ಕಾವೇರಿ ನೀರು ಹಂಚಿಕೆ ಪ್ರಾಧಿಕಾರ ಮತ್ತು ಸುಪ್ರೀಂ ಕೋರ್ಟ್ ಗೆ ಕಾವೇರಿ ಅಚ್ಚುಕಟ್ಟು ಭಾಗದಲ್ಲಿ ಆಗಿರುವ ಬರ ಪರಿಸ್ಥಿತಿಯನ್ನು ಮನವರಿಕೆ ಮಾಡಬೇಕು. ವಾಡಿಕೆಗಿಂತಲೂ 33%ರಷ್ಟು ಕಡಿಮೆ ಮಳೆ ಆಗಿರುವುದು ಮತ್ತು ಕಬಿನಿ -ಕೃಷ್ಣರಾಜ ಸಾಗರದಲ್ಲಿ ಶೇಖರಣೆಗೊಂಡಿರುವ ನೀರಿನ ಮಟ್ಟದ ಅಂಕಿ-ಅಂಶವನ್ನು ಪ್ರಾಧಿಕಾರಕ್ಕೆ ಸಲ್ಲಿಸಿ ನೀರು ಹರಿಸುವುದನ್ನು ನಿಲ್ಲಿಸಬೇಕು.ಅಲ್ಲದೆ ತಾಲೂಕಿನ ಪಂಪ್ ಸೆಟ್ ಬೆಳಗಿನ ಸಮಯದಲ್ಲಿ 12ಘಂಟೆಗಳ ಕಾಲ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು.ತಾಲೂಕಿನ ಖಾಸಗಿ ವ್ಯಕ್ತಿಗಳಿಂದ ಆಗಿರುವ ಸರ್ಕಾರಿ ಜಾಗಗಳ ಒತ್ತುವರಿ ತೆರವು ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದರು.
ಜಾಥಾದಲ್ಲಿ ರೈತ ಸಂಘದ ಜಿಲ್ಲಾ ಮುಖಂಡ ಬೂದಹಳ್ಳಿ ಶಂಕರ್, ಶಾಂತಮೂರ್ತಿ, ತಾಲೂಕು ಉಪಾಧ್ಯಕ್ಷ ತಲಕಾಡು ದಿನೇಶ್, ಪ್ರಧಾನ ಕಾರ್ಯದರ್ಶಿ ಅತ್ತಹಳ್ಳಿ ಶಿವನಂಜು, ಖಜಾಂಚಿ ಕೊತ್ತೆಗಾಲ ಮಹೇಶ್, ಟೌನ್ ಅಧ್ಯಕ್ಷ ಈ.ರಾಜು, ಬನ್ನೂರು ಅಧ್ಯಕ್ಷ ಹುಚ್ಚೇಗೌಡ, ಮಹೇಶ್, ಮಹೇಂದ್ರ, ಹೂವಯ್ಯ, ಶಿವರುದ್ರ, ಮಲ್ಲಿಕಾರ್ಜುನಸ್ವಾಮಿ, ಗೋಪಾಲ್, ಪರಶಿವ, ಬಸವಲಿಂಗ, ಸಿದ್ದರಾಜು, ಮಹದೇವಸ್ವಾಮಿ, ರಾಜೇಂದ್ರ, ಚಂದ್ರಶೇಖರ್ ಇತರರು ಹಾಜರಿದ್ದರು.