ತಮಿಳುನಾಡಿಗೆ ಒಲಿದ ಮಷ್ತಾಕ್ ಅಲಿ ಟ್ರೋಫಿ, ಕರ್ನಾಟಕಕ್ಕೆ ನಿರಾಸೆ

ನವದೆಹಲಿ, ನ.22- ಕೊನೆಯ ಎಸೆತದಲ್ಲಿ ಶಾರುಖ್ ಖಾನ್ ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ತಮಿಳುನಾಡು ಮುಷ್ತಾಕ್ ಅಲಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.
ಈ ಮೂಲಕ ಪ್ರಶ್ರಸ್ತಿ ಗೆಲ್ಲುವ ಕನಸು ಕಾಣುತ್ತಿದ್ದ ಕರ್ನಾಟಕದ ಆಸೆ ನುಚ್ಚು ನೂರಾಯಿತು.
ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇಂದು ನಡೆದ ಫೈನಲ್ ಪಂದ್ಯದಲ್ಲಿ ತಮಿಳುನಾಡು, ಕರ್ನಾಟಕದ ವಿರುದ್ದ ನಾಲ್ಕು ವಿಕೆಟ್ ಗಳ ರೋಚಕ ಜಯ ಸಾಧಿಸಿತು.‌
ಶಾರುಖ್‌‌ ಸಿಕ್ಸರ್ ಬಾರಿಸುತ್ತಿದ್ದಂತೆ ಕರ್ನಾಟಕದ ಪಾಳಯದಲ್ಲಿ ನಿರಾಸೆಯ ಕಾರ್ಮೋಡ ಕವಿಯಿತು.
ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಆರಂಭಿಕರ ವೈಫಲ್ಯದ ಹೊರತಾಗಿಯೂ 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 151ರನ್ ​ಗಳ ಸವಾಲಿನ ಮೊತ್ತ ದಾಖಲಿಸಿತು.
ಅಭಿನವ್ ಮನೋಹರ್ 37 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್​ ಬಾರಿಸಿ 46 ರನ್​ಗಳಿಸಿದರೆ, ಪ್ರವೀಣ್ ದುಬೆ 25 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ 33 ರನ್​ಗಳಿಸಿದರು.
ತಮಿಳುನಾಡು ಪರ ಸಾಯಿ ಕಿಶೋರ್ 12 ರನ್ ನೀಡಿ ಮೂರು ವಿಕೆಟ್ ಪಡೆದರು.
152 ರನ್​ಗಳ ಗುರಿ ಪಡೆದ ತಮಿಳುನಾಡು ಕೊನೆಯ ಓವರ್​ನಲ್ಲಿ ಅಗತ್ಯವಿದ್ದ 16 ರನ್​ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿ ಗೆಲುವಿನ ನಗೆ ಬೀರಿತು.
ಹರಿ ನಿಶಾಂತ್​ 12 ಎಸೆತಗಳಲ್ಲಿ 23, ಎನ್​ ಜಗದೀಶನ್​ 46 ಎಸೆತಗಳಲ್ಲಿ 41 ರನ್‌, ಶಾರುಖ್​ ಖಾನ್​ 15 ಎಸೆತಗಳಲ್ಲಿ ಅಜೇಯ 33 ರನ್​ ಸಿಡಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.
ತಮಿಳುನಾಡು ಮೂರನೇ ಬಾರಿ ಪ್ರಶಸ್ತಿ ಗೆದ್ದ ಕೀರ್ತಿಗೆ ಭಾಜನವಾಯಿತು.