ತಮಿಳುನಾಡಲ್ಲಿ ೪೫ ಕಡೆ ಎನ್‌ಐಎ ದಾಳಿ

ಚೆನ್ನೈ,ನ.೧೦- ತಮಿಳುನಾಡಿನ ಕೊಯಮತ್ತೂರು ಬಳಿ ನಡೆದ ಕಾರು ಸ್ಫೋಟಗೊಂಡ ಪ್ರಕರಣ ತನಿಖೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಅಧಿಕಾರಿಗಳು ಇಂದು ನಗರದ ೪೫ಕ್ಕೂ ಹೆಚ್ಚು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಸ್ಫೋಟಕ್ಕೆ ಸಂಬಂಧಿಸಿದ ಶಂಕಿತರು ಮತ್ತು ಬೆಂಬಲಿಗರ ಮನೆಗಳ ಮೇಲೆ ದಾಳಿ ನಡೆಸಿರುವ ಎನ್‌ಐಎ ಅಧಿಕಾರಿಗಳು ಆಸ್ತಿ-ಪಾಸ್ತಿ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ನಗರದ ಪುದುಪೇಟ್, ಮನ್ನಾಡಿ, ಜಮಾಲಿಯಾ, ಪೆರಂಬೂರ್‌ನಲ್ಲಿ ಕೊಯಮತ್ತೂರಿನ ಕೊಟ್ಟೈಮೇಡು, ಉಕ್ಕಡಂ, ಪೊನ್ವಿಜ ನಗರ ಮತ್ತು ರಥಿನಪುರಿ ಸೇರಿದಂತೆ ೪೫ ಕ್ಕೂ ಹೆಚ್ಚು ಸ್ಥಳಗಳಲ್ಲಿ ಅಧಿಕಾರಿಗಳ ತಂಡಗಳು ಏಕಕಾಲದ ದಾಳಿ ನಡೆಸಿ ಶೋಧ ಕಾರ್ಯ ನಡೆಸಲಾಗಿದೆ. ಕಳೆದ ಅ ೨೩ರ ದೀಪಾವಳಿ ಸಮಯದಲ್ಲಿ ಮುಂಜಾನೆ ೪.೨೦ರ ಸುಮಾರಿಗೆ ತಮಿಳುನಾಡಿನ ಕೊಯಮತ್ತೂರಿನ ಈಶ್ವರನ್ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಅಳವಡಿಸಿದ್ದ ಮಾರುತಿ ೮೦೦ ಕಾರೊಂದು ಸ್ಫೋಟಗೊಂಡಿತ್ತು.
ಜಮೀಶಾ ಸಾವು:
ಈ ವೇಳೆ ೨೫ ವರ್ಷದ ಜಮೀಶಾ ಮುಬಿನ್ ಎಂಬ ವ್ಯಕ್ತಿ ಮೃತಪಟ್ಟಿದ್ದನು. ಈ ಕುರಿತಂತೆ ತನಿಖೆ ನಡೆಸಿದ ಪೊಲೀಸರು ಜಮೀಶಾ ಮುಬಿನ್ ಮನೆಯಲ್ಲಿ ದೇಶಿ ನಿರ್ಮಿತ ಮದ್ದುಗುಂಡುಗಳು ಕೆಲವು ಐಸಿಸ್ ಬೆಂಬಲಿತ ಬರಹಗಳನ್ನು ವಶಪಡಿಸಿಕೊಂಡಿದ್ದರು.
ಇದೊಂದು ಉಗ್ರಗಾಮಿ ಕೃತ್ಯ ಎನ್ನುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಎನ್ ಐಎಗೆ ವಹಿಸಿತ್ತು.ಅಲ್ಲಿಂದ ತನಿಖೆಯನ್ನು ತೀವ್ರಗೊಳಿಸಿರುವ ಅಧಿಕಾರಿಗಳ ತಂಡವು ೬ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ಕೈಗೊಂಡಿದೆ.
ಸಂಬಂಧಿ ಸೆರೆ:
ಅರೋಪಿಯು ಸ್ಫೋಟದಲ್ಲಿ ಮೃತಪಟ್ಟ ಜುಮೇಜಾ ಮುಬೀನ್ ಸಂಬಂಧಿ ಅಫ್ಸರ್ ಖಾನ್ ಆಗಿದ್ದು,ಈತ ಕಳೆದ ಎರಡು ವರ್ಷದಿಂದ ಇ ಕಾಮರ್ಸ್ (ಆನ್‌ಲೈನ್ ಶಾಪಿಂಗ್) ಮೂಲಕ ಸಣ್ಣ ಸಣ್ಣ ಪ್ರಮಾಣದಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಿದ್ದ. ಬಗ್ಗೆಯೂ ಎನ್‌ಐಎ ಮಾಹಿತಿ ಕಲೆ ಹಾಕಿದೆ. ಯಾರಿಗೂ ಅನುಮಾನ ಬರದ ರೀತಿಯಲ್ಲಿ ಈತ ಸ್ಫೋಟಕಕ್ಕೆ ಬೇಕಾದ ರಾಸಾಯನಿಕಗಳನ್ನು ಆರ್ಡರ್ ಮಾಡಿಕೊಳ್ಳುತ್ತಿದ್ದ. ಹೀಗಾಗಿ ಈ ಸ್ಫೋಟದ ಹಿಂದ ಅಫ್ಸರ್ ಖಾನ್ ಪಾತ್ರ ಪ್ರಮುಖವಾಗಿದೆ.
ತನಿಖೆ ಚುರುಕು:
ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಕೊಯಮತ್ತೂರು ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ಮಹತ್ವದ ಮಾಹಿತಿ ಪಡೆದು ಕಾರು ಸ್ಫೋಟ ನಡೆದ ಸ್ಥಳಕ್ಕೆ ಬೇಟಿ ನೀಡಿ ಸ್ಪೋಟದಲ್ಲಿ ಮೃತಪಟ್ಟಿರುವ ಮುಬಿನ್ ಮನೆಗೆ ಭೇಟಿ ನೀಡಿ ಪರಿಶೀಲಿಸಿ ತನಿಖೆಯನ್ನು ಚುರುಕುಗೊಳಿಸಿದ್ದರು. ೨೦೧೯ಲ್ಲೇ ಮುಂಬಿನ ಭಯೋತ್ಪಾದನೆ ನಿಗ್ರಹ ದಳದ ರೇಡಾರ್‌ನಲ್ಲಿದ್ದ. ೨೦೧೯ರಲ್ಲಿ ಈತನನ್ನು ಉಗ್ರರ ಜೊತೆಗಿನ ಸಂಪರ್ಕ ಕುರಿತು ವಿಚಾರಣೆ ನಡೆಸಲಾಗಿತ್ತು.
ಸಿಲಿಂಡರ್ ಸ್ಫೋಟಿಸಿ ಸಾವು:
ಮುಬೀನ್‌ನನ್ನು ೨೦೧೯ರಲ್ಲಿ ಐಸಿಸ್ ನಂಟಿನ ಬಗ್ಗೆ ವಿಚಾರಣೆ ಮಾಡಿ ಸಾಕ್ಷ್ಯ ಸಿಗದ ಕಾರಣ ಬಿಡುಗಡೆ ಮಾಡಲಾಗಿತ್ತು. ಈತ ಅ.೨೩ ನಸುಕಿನ ೪ ಗಂಟೆಗೆ ಈಶ್ವರನ್ ದೇಗುಲ ಬಳಿ ಕಾರ್‌ನಲ್ಲಿ ಸಾಗುತ್ತಿದ್ದಾಗ, ಕಾರಿನಲ್ಲಿನ ಸಿಲಿಂಡರ್ ಸ್ಫೋಟಿಸಿ ಸಾವನ್ನಪ್ಪಿದ್ದ. ಪೊಲೀಸರು ಈತನ ಮನೆ ಶೋಧಿಸಿದಾಗ ಬಾಂಬ್ ತಯಾರಿಕಾ ರಾಸಾಯನಿಕ, ಬೇರಿಂಗ್‌ಗಳು ಪತ್ತೆಯಾಗಿದ್ದವು. ಇನ್ನು ಇದಕ್ಕೂ ಕೆಲ ತಾಸು ಮುನ್ನ ರಾತ್ರಿ ೧೧.೨೫ಕ್ಕೆ ಈತನ ಮನೆಯಿಂದ ಐವರು ಶಂಕಾಸ್ಪದ ಗೋಣಿಚೀಲ ಒಯ್ದಿಯ್ದು ಪತ್ತೆಯಾಗಿ ತನಿಖೆಯನ್ನು ತೀವ್ರಗೊಳಿಸಲಾಗಿದೆ.