ತಮಿಳನಾಡಿಗೆ ನೀರು ಹರಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಸಂಜೆವಾಣಿ ವಾರ್ತೆ
ಮಂಡ್ಯ: ಆ.18:- ರೈತರ ಜೀವನಾಡಿ ಕೃಷ್ಣರಾಜಸಾಗರದಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವ ಸರ್ಕಾರದ ವಿರುದ್ಧ ರೈತರು ಮಂಡ್ಯದಲ್ಲಿ ಪ್ರತಿಭಟಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ (ಮೂಲ ಸಂಘಟನೆ) ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಧರಣಿ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶಿಸಿದರು.
ಕೃಷ್ಣರಾಜ ಸಾಗರ ಜಿಲ್ಲೆಯ ರೈತರ ಬದುಕಿಗೆ ಜೀವನಾಡಿಯಾಗಿದೆ. ಮುಂಗಾರು ಮಳೆ ಸಮಯದಲ್ಲಿ ಇಷ್ಟೊತ್ತಿಗೆ ಜಲಾಶಯ ಭರ್ತಿಯಾಗ ಬೇಕಾಗಿತ್ತು ಆದರೆ ಮಳೆ ಕೊರತೆ ಹಿನ್ನೆಲೆಯಲ್ಲಿ 110 ಅಡಿ ವರೆಗೆ ಮಾತ್ರ ಜಲಾಶಯದಲ್ಲಿ ನೀರಿದ್ದು, ಆದರೂ ಸಹ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ ಎಂದು ಕಿಡಿ ಕಾರಿದರು.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸಂಕಷ್ಟ ಪರಿಸ್ಥಿತಿ ಬಗ್ಗೆ ಸುಪ್ರೀಂ ಕೋರ್ಟ್ ಗೆ ರಾಜ್ಯ ಸರ್ಕಾರ ಪರಿಸ್ತಿತಿಯನ್ನು ಮನದಟ್ಟು ಮಾಡಿಸಿ ಜಿಲ್ಲೆಯ ರೈತರ ಹಿತವನ್ನು ಕಾಪಾಡಬೇಕೆಂದು ಪ್ರತಿಭಟನಾ ನಿರತ ರೈತರು ಒತ್ತಾಯಿಸಿದರು.
ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ನೀರು ಬಿಡುಗಡೆ ಮಾಡುತ್ತಿರುವ ಬಗ್ಗೆ ರೈತರು ಬೇಕಾದರೆ ನ್ಯಾಯಾಲಯಕ್ಕೆ ಹೋಗಲಿ ಎಂದು ಹೇಳಿರುವುದು ನಾಚಿಕೆಗೇಡು.ಸರ್ಕಾರದ ಸಚಿವರಾಗಿ ನಾಡಿನ ರೈತರ ಹಿತದ ಬಗ್ಗೆ ಚಿಂತಿಸದೆ ಉಡಾಫೆ ಯಾಗಿ ವರ್ತಿಸಿದ್ದಾರೆ ಎಂದು ಆಕ್ರೋಶಿಸಿದರು.
ಜಲಾಶಯದ ಅಚ್ಚು ಕಟ್ಟು ಪ್ರದೇಶದ ನಾಲೆಗಳಿಗೆ ಕಟ್ಟು ಪದ್ಧತಿಯಲ್ಲಿ ನೀರು ಬಿಟ್ಟು,ತಮಿಳುನಾಡಿಗೆ ಮಾತ್ರ ಹೆಚ್ಚಿನ ಪ್ರಮಾಣದ ನೀರು ಬಿಟ್ಟಿದ್ದಾರೆ.ಈ ತಕ್ಷಣ ನದಿಗೆ ಬಿಡಲಾಗಿರುವ ನೀರು ಸ್ಥಗಿತಗೊಳಿಸಿ ನಾಲೆಗಳಿಗೆ ನಿರಂತರ ನೀರು ಹರಿಸುವಂತೆ ಒತ್ತಾಯಿಸಿದರು.
ಕಳೆದ ಒಂದು ವಾರದಿಂದ ಬಿಜೆಪಿ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳು ಹೆದ್ದಾರಿಯಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಟ್ಕೊಂಡು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿಕೊಂಡು ಸ್ವಹಿತಾಸಕ್ತಿಗಾಗಿ ಚಳವಳಿ ಮಾಡಿರುವುದನ್ನ ಖಂಡಿಸಿದ ಪ್ರತಿಭಟನಾಕಾರರು ಅವರಿಗೆ ರೈತರ ಹಿತಚಿಂತನೆ ಮುಖ್ಯವಾಗದೆ ವೈಯಕ್ತಿಕ ಪ್ರತಿಷ್ಠೆಯನ್ನು ಮುಂದೆ ಮಾಡಿಕೊಂಡು ಸಾರ್ವಜನಿಕ ಹಿತಾಸಕ್ತಿ ಕಡೆಗಣಿಸಿದ್ದಾರೆ.ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಇಂತಹ ಪ್ರಸಂಗಗಳಿಗೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿದರು.
ಕಾವೇರಿ ನದಿ ನೀರು ವಿಚಾರದಲ್ಲಿ ರಾಜ್ಯ ಸರ್ಕಾರ ಜಿಲ್ಲೆಯ ರೈತರ ಪರ ನಿಲ್ಲದಿದ್ದರೆ ಜಿಲ್ಲೆಯ ಜನಪ್ರತಿ
ನಿಧಿಗಳು,ಮಂತ್ರಿಗಳು,ಲೋಕಸಭಾ ಸದಸ್ಯರ ವಿರುದ್ಧ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.
ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಎಸ್.ಮಂಜೇಶ್ ಗೌಡ, ಮುಖಂಡರಾದ ಹೆಚ್ ಜೆ ಪ್ರಭುಲಿಂಗ, ವೈ.ಕೆ.ರಾಮೇಗೌಡ, ಕೆ.ರಾಮಲಿಂಗೇಗೌಡ, ವೆಂಕಟೇಶ್, ಬೋರಲಿಂಗೇಗೌಡ, ಉಮೇಶ್ ನೇತೃತ್ವ ವಹಿಸಿದ್ದರು.