
ಕಲಬುರಗಿ,ಜು 23:ಒಂದು ಕಡೆ ತಬಲಾ ಮಾಂತ್ರಿಕ ಪಂಡಿತ ರಘುನಾಥ ನಾಕೋಡರ ತಬಲಾನಾದ ಶಬ್ದ ನೆರೆದವರನ್ನು ರೋಮಾಂಚನ ಗೊಳಿಸುವುದರೊಂದಿಗೆ ಮೂಕ ವಿಸ್ಮಿತರಾಗಿ ಮಾಡಿದ್ದು, ಜೊತೆಗೆ ಖ್ಯಾತ ಹಿಂದುಸ್ತಾನಿ ಗಾಯಕಿ ರೇಣುಕಾ ನಾಕೋಡರ ವಚನ ಸುಧೆ. ಒಟ್ಟಿನಲ್ಲಿ ಸಂಗೀತದ ತಾಕತ್ತು ಸಮಾಜಕ್ಕೆ ಪರಿಚಯಿಸಿದ ಅಪರೂಪದ ಸಂದರ್ಭ. ಇಷ್ಟೆಲ್ಲ ಕಾರ್ಯಕ್ರಮ ನಡೆದಿರುವುದು ಕಲಬುರಗಿ ನಗರದ ಸಂತೋಷ ಕಾಲೋನಿಯ ಕೆಎಚ್ ಬಿ ಗ್ರೀನ್ ಪಾರ್ಕ ಬಡಾವಣೆಯ ಹನುಮಾನ ದೇವಸ್ಥಾನದ ಆವರಣದಲ್ಲಿ ಶನಿವಾರ ಸಾಯಂಕಾಲ ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘ ಹಾಗೂ ಕೆಎಚ್‍ಪಿ ಗ್ರೀನ್ ಪಾರ್ಕ್ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಸಮಾಜ ಸೇವಕ ಹಣಮಂತರಾಯ ಅಟ್ಟೂರ 26 ವರ್ಷದ ಸಮಾಜ ಸೇವೆಯ ನಿಮಿತ್ಯ ಸರಣಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಂಜೀವ ಕುಮಾರ ಶೆಟ್ಟಿ ಮಾತನಾಡಿ, ಅಟ್ಟೂರ ಅವರ ಸಮಾಜ ಸೇವೆ, ಹೋರಾಟ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಹೋರಾಟ ಮಾಡಿ ನ್ಯಾಯ ದೊರಕಿಸಿ ಕೊಟ್ಟಿರುವುದು ಅವರ ಕುರಿತು ಬರೆದ ಕೃತಿಯೆ ಸಾಕ್ಷಿಯಾಗಿದೆ.ಸಮಾಜ ಸೇವೆ ಮಾಡಲು ಯಾವುದೇ ಹುದ್ದೆ ಅವಶ್ಯಕತೆ ಇಲ್ಲ ತಮ್ಮ ಕಾಯಕದೊಂದಿಗೆ ಯಾವುದೇ ತರಹದ ಅಪೇಕ್ಷೆ ಇಲ್ಲದೆ ಸೇವೆ ಗೈಯುತ್ತಿರುವ ಆದರ್ಶ ವಾದ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು. ವೇದಿಕೆ ಮೇಲೆ ಸಮಾಜ ಸೇವಕರಾದ ಕೇದಾರ ಕುಲಕರ್ಣಿ, ಹಣಮಂತರಾಯ ಅಟ್ಟೂರ ಇದ್ದರು. ಖ್ಯಾತ ಸಂಗೀತ ಕಲಾವಿದರಾದ ಸಂಗಮೇಶ ಶಾಸ್ತ್ರಿ ಮಾಶಾಳ ಹಾಗೂ ನಾಗರಾಜ ಹೊನ್ನ ಕಿರಣಗಿ ಪ್ರಾರ್ಥಿಸಿದರು. ಸಂಗಮೇಶ ಸರಡಗಿ ಸ್ವಾಗತಿಸಿದರು. ಚಂದ್ರಕಾಂತ ತಳವಾರ ನಿರೂಪಿಸಿದರು. ಮಲಕಾರಿ ಪೂಜಾರಿ ವಂದಿಸಿದರು. ಕಾರ್ಯಕ್ರಮದಲ್ಲಿ ನಗರದ ಹಾಗೂ ಬಡಾವಣೆಯ ನೂರಾರು ಜನರು ಭಾಗವಹಿಸಿದರು.