ತಪ್ಪು ಮಾಹಿತಿ: ವಿದ್ಯಾರಾಣಿ ಭಟ್ ಕ್ಷಮೆ ಕೇಳಿದ ಡಾ. ಶರಣಪ್ರಕಾಶ್ ಪಾಟೀಲ್

ಕಲಬುರಗಿ:ನ.14:ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಅಕ್ರಮ ಮತದಾರರ ವಿಳಾಸದ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ನ್ಯಾಯವಾದಿ ಹಾಗೂ ವಿಠಲ್ ನಗರದ ನಿವಾಸಿ ಶ್ರೀಮತಿ ವಿದ್ಯಾರಾಣಿ ಭಟ್ ಅವರ ಕ್ಷಮೆ ಕೋರುವುದಾಗಿ ಮಾಜಿ ಸಚಿವ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಧ್ಯಮ ವಕ್ತಾರ ಡಾ. ಶರಣಪ್ರಕಾಶ್ ಪಾಟೀಲ್ ಅವರು ತಿಳಿಸಿದ್ದಾರೆ.
ಶನಿವಾರ ಬೆಳಿಗ್ಗೆ 10-30 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರ ಹಾಗೂ ಉಪಮಹಾಪೌರ ಸ್ಥಾನಗಳ ಚುನಾವಣೆ ಕುರಿತು ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ನಾನು ಮಾತನಾಡಿದ್ದು, ಚುನಾವಣೆಯಲ್ಲಿ ವಾಮಮಾರ್ಗದಿಂದ ಬಿಜೆಪಿಯವರು ಏನಾದರೂ ಮಾಡಿ ಅಧಿಕಾರದ ಗದ್ದುಗೆ ಏರಬೇಕೆಂಬ ಕುತಂತ್ರದಿಂದ ನಗರಕ್ಕೆ ಸಂಬಂದವಿಲ್ಲದ ಹೊರಗಿನವರಾದ ಸುಮಾರು 7 ಜನ ವಿಧಾನ ಪರಿಷತ್ ಸದಸ್ಯರ ಹೆಸರುಗಳು ನಗರದ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದೆ ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಇದರಲ್ಲಿ ವಿಧಾನ ಪರಿಷತ್ ಸದಸ್ಯರಾದ ರಘುನಾಥ್ ಮಲ್ಕಾಪೂರೆ ಮತ್ತು ಮುನಿರಾಜು ಅವರ ಹೆಸರು ವಿಠಲ ನಗರ ನಿವಾಸಿ ಹಾಗೂ ವಕೀಲರಾದ ಶ್ರೀಮತಿ ವಿದ್ಯಾರಾಣಿ ಭಟ್ ಅವರ ಮನೆಯ ವಿಳಾಸದ ಹೆಸರಿಗೆ ಮತದಾರರ ಪಟ್ಟಿಯಲ್ಲಿ ನೊಂದಾವಣೆ ಮಾಡುತ್ತಿದ್ದಾರೆಂದು ತಪ್ಪು ಮಾಹಿತಿಯಿಂದ ಶ್ರೀಮತಿ ವಿದ್ಯಾರಾಣಿ ಭಟ್ ಅವರ ಹೆಸರು ಪ್ರಸ್ತಾಪ ಮಾಡಲಾಗಿದ್ದು, ಈ ಈರ್ವರ ಹೆಸರುಗಳು ಶ್ರೀಮತಿ ವಿದ್ಯಾರಾಣಿ ಭಟ್ ಅವರ ಮನೆಯ ವಿಳಾಸದಲ್ಲಿ ನೊಂದಣಿಯಾಗಿರುವದಿಲ್ಲ. ವಿಠಲ ನಗರದ ಬೇರೆ ಇನ್ನೊಂದು ಮನೆಯ ವಿಳಾಸದಲ್ಲಿ ನೊಂದಣಿಗೆ ಅರ್ಜಿ ಸಲ್ಲಿಸಿರುತ್ತಾರೆ. ಅದಕ್ಕಾಗಿ ನಾನು ಹೇಳಿದ ತಪ್ಪಿಗೆ ಶ್ರೀಮತಿ ವಿದ್ಯಾರಾಣಿ ಭಟ್ ಅವರಿಗೆ ಕ್ಷಮೆ ಕೋರುತ್ತೇನೆ ಎಂದು ಡಾ. ಶರಣಪ್ರಕಾಶ್ ಪಾಟೀಲ್ ಅವರು ತಿಳಿಸಿದ್ದಾರೆ.