ತಪ್ಪು ಮಾಡದಿದ್ದರೆ ನಿರೀಕ್ಷಣಾ ಜಾಮೀನು ಯಾಕೆ ಪಡೆಯಬೇಕಿತ್ತು; ಬಿಜೆಪಿ ಪ್ರಶ್ನೆ

ದಾವಣಗೆರೆ.ಜ.೧೮: ಶಾಮನೂರು ಶಿವಶಂಕರಪ್ಪ ಅವರು ಹಿರಿಯರು, ಅವರ ಹಿರಿತನದ ಬಗ್ಗೆ ನಮಗೆ ಗೌರವ ಇದೆ. ಅವರ ಮಾತುಗಳು ಹಿರಿಯ ರಾಜಕಾರಣಿಗಳಿಗೆ ಮುಜುಗರ ತರಿಸಿದೆ ಎಂದು ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮಹಾಭಾರತ ಕಾಲದಲ್ಲಿ ದೃತರಾಷ್ಟ್ರ ಮಗನ ಮೇಲಿನ ಕುರುಡು ಪ್ರೇಮದಿಂದ ಇಡೀ ಕುರು ವಂಶ ನಾಶ ಆಗಿದ್ದನು ನಾವು ಓದಿ ತಿಳಿದುಕೊಂಡಿದ್ದೇವೆ. ಅದೇ ರೀತಿ ನೀವು ಮಾಡುತ್ತಿದ್ದೀರಿ, ಇನ್ನ ಮೇಲಾದರೂ ತಮ್ಮ ಮಗನ ಮೇಲಿನ ಕುರುಡು ಪ್ರೇಮವನ್ನು ಬಿಟ್ಟುಬುದ್ಧಿ ಹೇಳುವ ಕೆಲಸ ನಿಮ್ಮಿಂದಾಗಲಿ ಎಂದು ಸಲಹೆ ನೀಡಿದರು.ಇದಲ್ಲದೇ ಬಿಜೆಪಿಯವರು ಗುಟ್ಕಾ, ಕಳ್ಳಭಟ್ಟಿ, ಹೆಂಡ ಮಾರಿದ್ದಾರೆ. ನಮಗೆ ಬುದ್ದಿ ಹೇಳುತ್ತಾರೆ ಎಂದಿದ್ದಾರೆ. ಆಕಳು, ಕುರಿ ಸಾಕಿದರೆ ಯಾರೂ ಕೇಸು ಹಾಕಲ್ಲ. ವನ್ಯ ಜೀವಿಗಳನ್ನು ಸಾಕಿದ್ದ ಕಾರಣ ಕೇಸು ದಾಖಲಾಗಿದೆ. ಅಲ್ಲದೇ ಒಂದು ವೇಳೆ ಅವರು ತಪ್ಪು ಮಾಡದಿದ್ದರೆ ನಿರೀಕ್ಷಣಾ ಜಾಮೀನು ಯಾಕೆ ಪಡೆಯಬೇಕಿತ್ತು. ಏನೇ ಮಾತನಾಡಿದರೂ ತಿಳಿದು ಮಾತನಾಡಲಿ. ಅವರು ಹಿರಿಯರು ಎಲ್ಲಾ ಮಾಹಿತಿ ಪಡೆದು ಮಾತನಾಡಲಿ ಎಂದು ಹೇಳಿದರು.ನೀವು, ನಿಮ್ಮ ಮಗ ಅಧಿಕಾರದಲ್ಲಿ ಇದ್ದಾಗ ಏನೇನು ಅಕ್ರಮ ಚಟುವಟಿಕೆ ಮಾಡಿದ್ದಾರೆ ಎನ್ನುವುದು ನಮಗೆ ಗೊತ್ತಿದೆ. ನಾವುಗಳು ಏನಾಪದರೂ ಮಾಡಿದ್ದರೆ ನೀವೂ ಕೂಡಾ ದಾಖಲೆ ಸಮೇತ ಸಾಬೀತು ಪಡಿಸಿ, ಹಾಗೇನಾದರೂ ನಾನು ಅಕ್ರಮ ಮಾಡಿದ್ದನ್ನು ಸಾಬೀತು ಪಡಿಸಲು ಮುಂದಾದರೆ ಅದನ್ನೆಲ್ಲಾ ಛಾಪಾ ಕಾಗದದ ಮೇಲೆ ಬರೆದು ಕೊಡುವೆ. ಒಂದು ವೇಳೆ ನಿಮ್ಮ ಮೇಲೆ ಅಕ್ರಮ ಸಾಬೀತಾದರೆ ನೀವುಗಳು ಛಾಪಾ ಕಾಗದದ ಮೇಲೆ ಬರೆದು ಕೊಡಲು ಸಿದ್ದರಿದ್ದೀರಾ ಎಂದು ಸವಾಲು ಹಾಕಿದರು.ಹಿರಿಯರಾದ ಶಾಮನೂರ ಶಿವಶಂಕರಪ್ಪ ಅವರಿಗೆ ತುಂಬಾ ವಯಸ್ಸಾಗಿದೆ. ಅವರ ಕುಟುಂಬದ ಇತಿಹಾಸವನ್ನು ಮರೆತಂತೆ ಕಾಣುತ್ತದೆ.ಈ ಹಿಂದೆ ನಿಮ್ಮ ಹೆಸರಿನಲ್ಲೇ ಸ್ಯಾಮ್ಸನ್ ಡಿಸ್ಟಿಲರಿ ತೆಗೆದು ಸೆಕೆಂಡ್ಸ್ ಬ್ರಾಂಡಿ ತಯಾರು ಮಾಡಿ ಒಬ್ಬ ಕೂಲಿ ಕಾರ್ಮಿಕ ಕುಡಿದು ಸತ್ತಿದ್ದನ್ನು ಶಾಮನೂರು ಶಿವಶಂಕರಪ್ಪನವರು ಮರೆತಿರುವ ಹಾಗೆ ಕಾಣುತ್ತದೆ. ಅಲ್ಲದೇ ಪತ್ರಿಕೆ ಸಂಪಾದಕರೊಬ್ಬರು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ್ದಕ್ಕೆ ಆತನಿಗೆ ಪೊಲೀಸ್ ಠಾಣೆಗೆ ಕರೆಯಿಸಿ ಚಪ್ಪಲಿಯಿಂದ ಹೊಡೆದ ಪ್ರಕರಣ ಮರೆತಂತೆ ಕಾಣುತ್ತದೆ.ದಾವಣಗೆರೆಯ ಎಲ್ಲಾ ಅಕ್ರಮಗಳಿಗೆ ಶಾಮನೂರು ಶಿವಶಂಕರಪ್ಪ ಅವರೇ ಪಿತಾಮಹ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮೇಯರ್ ಜಯಮ್ಮ, ದೂಡಾ ಅಧ್ಯಕ್ಷ ಎ.ವೈ.ಪ್ರಕಾಶ್, ಲೋಕಿಕೆರೆ ನಾಗರಾಜ್, ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್, ರಾಜನಹಳ್ಳಿ ಶಿವಕುಮಾರ್, ಶಿವನಗೌಡ ಟಿ ಪಾಟೀಲ್, ಟಿಂಕರ್ ಮಂಜಣ್ಣ ಮತ್ತಿತರರಿದ್ದರು