ತಪ್ಪು ತಿಳಿದು ಇವಿಎಂ ಪುಡಿ ಪುಡಿ ಮಾಡಿದ ಗ್ರಾಮಸ್ಥರು

ವಿಜಯಪುರ,ಮೇ.11-ಕಾಯ್ದಿರಿಸಿದ ಇವಿಎಂಗಳನ್ನು ವಾಪಾಸ್ಸು ಒಯ್ಯುವ ಸಂದರ್ಭದಲ್ಲಿ ಇವಿಎಂ ಮಷೀನ್ ಸಾಗಾಟ ಮಾಡಲಾಗುತ್ತದೆ ಎಂದು ಪರಿಭಾವಿಸಿ ಮಸಬಿನಾಳ ಗ್ರಾಮಸ್ಥರು ಕಾಯ್ದಿಟ್ಟ ಮತಯಂತ್ರ ಒಡೆದು ಹಾಕಿ ಕಾರು ಜಖಂ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆ ಬಸವನಬಾಗೇವಾಡಿ ಕ್ಷೇತ್ರದ ಮಸಬಿನಾಳ ಗ್ರಾಮದಲ್ಲಿ ನಡೆದಿದೆ. ಘಟನೆಯಿಂದಾಗಿ ಕೆಲಕಾಲ ಮತದಾನ ಸ್ಥಗಿತಗೊಂಡಿದ್ದರಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.
ಬಿಸನಾಳ, ಡೋಣುರ ಗ್ರಾಮದಿಂದ ವಿಜಯಪುರಕ್ಕೆ ಕಾಯ್ದಿರಿಸಿದ ಇವಿಎಂ ಮಷಿನ್‍ಗಳನ್ನು ವಾಪಸ್ ತೆಗೆದುಕೊಂಡು ಬರುತ್ತಿದ್ದಾಗ ಈ ಘಟನೆ ನಡೆದಿದೆ.
ಮತಯಂತ್ರ ಕೆಟ್ಟಲ್ಲಿ ಬಳಕೆ ಎಂದು ರಿಸರ್ವ್ ಇಡಲಾಗಿದ್ದ ಇವಿಎಂ, ವಿವಿಪ್ಯಾಟ್ ಮಶೀನ್‍ಗಳು ವಾಪಸ್ ತರುವುದನ್ನು ಗಮನಿಸಿದ ಸಿಬ್ಬಂದಿಗಳನ್ನು ಪ್ರಶ್ನಿಸಿದ್ದಾರೆ. ಆದರೆ ಅಧಿಕಾರಿಗಳಿಂದ ಸಮರ್ಪಕವಾದ ಉತ್ತರ ಬಾರದ ಕಾರಣ ಸಹನೆ ಕಳೆದುಕೊಂಡ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ, ಅರ್ಧಕ್ಕೆ ಮತದಾನ ಕಾರ್ಯ ಸ್ಥಗಿತಗೊಳಿಸಿ ವಾಪಸ್ ಕೊಂಡೊಯ್ಯಲಾಗುತ್ತಿದೆ ಎಂದು ತಪ್ಪು ಭಾವಿಸಿ ಅಧಿಕಾರಿಗಳ ಹಾಗೂ ಪೆÇಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಕುರಿತು ವಿಡಿಯೋ ದೃಶ್ಯಾವಳಿಗಳು ಹರಿದಾಡುತ್ತಿವೆ.
ಇವಿಎಂ ಜಖಂ
ಮಸಬಿನಾಳದಲ್ಲಿ ನಡೆದ ಈ ಘಟನೆಯಲ್ಲಿ ಸೆಕ್ಟರ್ ಅಧಿಕಾರಿಗೆ ಗಾಯಗಳಾಗಿದ್ದು, ಎರಡು ಕಂಟ್ರೋಲ್ ಯೂನಿಟ್, 2 ಬ್ಯಾಲೇಟ್ ಯೂನಿಟ್, 3 ವಿವಿಪ್ಯಾಟ್‍ಗಳು ಜಖಂಗೊಂಡಿವೆ.
ಮಸಬಿನಾಳದಲ್ಲಿ ಘಟನೆ ನಡೆಯುತ್ತಿದ್ದಂತೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪೆÇಲೀಸ್ ಅಧೀಕ್ಷಕ ಎಚ್.ಡಿ. ಆನಂದಕುಮಾರ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.
23 ಕ್ಕೂ ಹೆಚ್ಚು ಜನರ ಬಂಧನ
`ಇವಿಎಂಗಳನ್ನು ಸಾಗಾಟ ಮಾಡಲಾಗುತ್ತದೆ ಎಂಬ ತಪ್ಪು ಕಲ್ಪನೆ ಆಧರಿಸಿ ಗ್ರಾಮಸ್ಥರಿಂದ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗಳ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 23 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೆÇಲೀಸ್ ಅಧೀಕ್ಷಕ ಎಚ್.ಡಿ. ಆನಂದಕುಮಾರ ತಿಳಿಸಿದರು.
ಮಸಬಿನಾಳದಲ್ಲಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ನಂತರ ಮಾಧ್ಯಮ ಪ್ರತಿನಿಧೀಗಲಿಗೆ ವಿವರಣೆ ನೀಡಿದ ಅವರು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ದಸ್ತಗೀರಿ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು, ಯಾರು ಸಹ ಈ ರೀತಿಯ ಕೃತ್ಯಗಳಿಗೆ ಮುಂದಾಗದಂತೆ ಕಠಿಣ ಎಚ್ಚರಿಕೆ ನೀಡಲಾಗಿದೆ. ಯಾರೇ ಇದ್ದರೂ ಸಹ ಚುನಾವಣಾ ಅಕ್ರಮ, ಶಾಂತಿ ಕದಡಲು ಮುಂದಾದರೆ ಅವರ ಮೇಲೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಇಲಾಖೆ ಸನ್ನದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದರು.