ತಪ್ಪಿದ ಟಿಕೆಟ್ ಸಂತೋಷ್ ಕಣ್ಣೀರು

ಬೆಂಗಳೂರು,ಏ.೧೩:ಹಾಸನದ ಅರಸೀಕೆರೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮುಖ್ಯಮಂತ್ರಿಗಳ ಮಾಜಿ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಕಣ್ಣೀರು ಹಾಕಿದ್ದಾರೆ.
ಅರಸೀಕೆರೆಯ ತಮ್ಮ ನಿವಾಸದ ಬಳಿ ಸೇರಿದ್ದ ಸಾವಿರಾರು ಕಾರ್ಯಕರ್ತರ ಮಧ್ಯೆ ಎನ್.ಆರ್. ಅಶೋಕ್ ಕಣ್ಣೀರಿಟ್ಟಿದ್ದು, ಕಾರ್ಯಕರ್ತರು ಅವರನ್ನು ಸಮಾಧಾನಪಡಿಸಿ ಟಿಕೆಟ್‌ಗಾಗಿ ಹೈಕಮಾಂಡ್ ಮೇಲೆ ಒತ್ತಡ ಹೇರೋಣ, ನೀವು ಧೈರ್ಯದಿಂದಿರಿ, ಕ್ಷೇತ್ರದ ಜನತೆ ನಿಮ್ಮ ಕೈ ಬಿಡಲ್ಲ ಎಂದು ಹೇಳಿದ್ದಾರೆ.
ಎನ್.ಆರ್. ಸಂತೋಷ್‌ರವರಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅವರ ಅರಸೀಕೆರೆ ನಿವಾಸದ ಬಳಿ ಬೆಂಬಲಿಗರ ಭಾರಿ ಸಭೆ ನಡೆದಿದ್ದು, ಬೆಂಬಲಿಗರ ಜತೆ ಮಾತನಾಡುವಾಗ ಎನ್.ಆರ್. ಸಂತೋಷ್ ಕಣ್ಣೀರಿಟ್ಟರು. ಇದು ಅವರ ಬೆಂಬರಿಗರಲ್ಲೂ ಕಣ್ಣೀರು ತರಿಸಿತು. ಈ ಸಂದರ್ಭದಲ್ಲೇ ಮಾತನಾಡಿದ ಹಲವು ಸ್ಥಳೀಯ ಬಿಜೆಪಿ ಮುಖಂಡರುಗಳು ನಾವು ನಿಮ್ಮ ಜತೆಗಿದ್ದೇವೆ. ಎದೆ ಗುಂದಬೇಡಿ, ನಿಮ್ಮದೇ ಆದ ರಾಜಕೀಯ ನಿರ್ಧಾರ ಮಾಡಿ ಎಂದು ಒತ್ತಾಯಿಸಿದರು.
ಎನ್.ಆರ್. ಸಂತೋಷ್ ಮುಂದಿನ ರಾಜಕೀಯ ನಿರ್ಧಾರದ ಬಗ್ಗೆ ಬೆಂಬಲಿಗರ ಜತೆ ಚರ್ಚಿಸಿದ್ದಾರೆ. ಹೈಕಮಾಂಡ್‌ನ ಮನವೊಲಿಸಿ ಟಿಕೆಟ್ ತರುವ ಪ್ರಯತ್ನವನ್ನೂ ನಡೆಸಿದ್ದಾರೆ.
ಎನ್.ಆರ್. ಸಂತೋಷ್ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರ ರಕ್ತ ಸಂಬಂಧಿಯಾಗಿದ್ದು, ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿದ್ದಾಗ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದರು. ಕಳೆದ ೨ ವರ್ಷಗಳಿಂದ ಅರಸೀಕೆರೆ ಕ್ಷೇತ್ರದಲ್ಲಿ ಬಿಜೆಪಿಯನ್ನು ಸಂಘಟಿಸಿ ಪ್ರಬಲವಾಗಿ ಬೆಳೆಸಿ ಈ ಚುನಾವಣೆಯಲ್ಲಿ ಸಹಜವಾಗಿಯೇ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು.