ತಪ್ಪಿದ ಕೈ ಟಿಕೆಟ್- ಪಕ್ಷೇತರರಾಗಿ ಸ್ಪರ್ಧೆ


ಸಂಜೆವಾಣಿ ವಾರ್ತೆ
ಹರಪನಹಳ್ಳಿ , ಏ,17- ಟಿಕೆಟ್ ಹಂಚಿಕೆ ವಿಚಾರವಾಗಿ ಹರಪನಹಳ್ಳಿ ಕಾಂಗ್ರೆಸ್‍ನಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ.ಪ್ರಕಾಶ್ ಅವರ ಹಿರಿಯ ಮಗಳು, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ಪಕ್ಷ ತೆಗೆದುಕೊಂಡಿರುವ ನಿರ್ಧಾರಕ್ಕೆ ವಿರುದ್ಧವಾಗಿ ಹೋಗಲು ನಿರ್ಧರಿಸಿದ್ದಾರೆ.
ಪಟ್ಟಣದಲ್ಲಿ ಭಾನುವಾರ ಕರೆದಿದ್ದ ಸಮಾನ ಮನಸ್ಕ ಸ್ವಾಭಿಮಾನಿ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಅವರ ಬೆಂಬಲಿಗರು ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಹೇರಿದರು.
ಮಾಜಿ ಶಾಸಕ ಎಂ.ಪಿ.ರವೀಂದ್ರ ನಿಧನರಾದ ಬಳಿಕ ಕ್ಷೇತ್ರದಲ್ಲಿ ಐದು ವರ್ಷ ಪಕ್ಷ ಸಂಘಟನೆ ಮಾಡಿರುವ ನಿಷ್ಠಾವಂತರಿಗೆ ಟಿಕೆಟ್ ಕೊಡದೆ ಈಚೆಗೆ ಪಕ್ಷ ಸೇರಿದವರಿಗೆ ಮಣೆ ಹಾಕಿದ್ದಾರೆ. ನೀವು ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಬೇಕು. ನಾವು ನಿಮ್ಮೊಂದಿಗಿದ್ದೇವೆ ಎಂದು ಕಾರ್ಯಕರ್ತರು ಆಗ್ರಹಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಧಿಕ್ಕಾರ ಕೂಗಿದರು.
ಎಂ.ಪಿ.ಲತಾ ಮಲ್ಲಿಕಾರ್ಜುನ್ ಮಾತನಾಡಿ, ಪಕ್ಷದ ಹೈಕಮಾಂಡ್ ತೆಗೆದುಕೊಂಡಿರುವ ನಿರ್ಧಾರ ಸ್ವೀಕರಿಸೋಣ. ಆದರೆ, ಯಾರಿಗೂ ಧಿಕ್ಕಾರ ಕೂಗುವುದು ಸರಿಯಲ್ಲ. ಯಾರನ್ನಾದರೂ ದೂರಿದರೆ, ಪಕ್ಷಕ್ಕೆ ಮತ್ತು ತಂದೆ ಪ್ರಕಾಶ್ ಅವರಿಗೆ ಅಪಮಾನ ಮಾಡಿದಂತೆ. ಕಾರ್ಯಕರ್ತರ ಅಭಿಪ್ರಾಯವನ್ನು ಗೌರವಿಸಿ, ನಿರ್ಧಾರ ಪ್ರಕಟಿಸುವೆ ಎಂದರು ಕಾರ್ಯಕರ್ತರು ಪಕ್ಷೇತರ ಅಭ್ಯರ್ಥಿ ಎಂದು ಘೋಷಿಸುವಂತೆ ಹಕ್ಕೊತ್ತಾಯ ಮಾಡಿದರು.
ಎಂ.ಪಿ.ಲತಾ ಅವರ ಪತಿ ಎಚ್.ಎಂ.ಮಲ್ಲಿಕಾರ್ಜುನ್ ಮಾತನಾಡಿ, ಯಾರ ಮಾತಿಗೂ ಕಿವಿಗೊಡದೆ ಯಾರ ಕುತಂತ್ರಕ್ಕೂ ಬಲಿಯಾಗದೆ ಕಾರ್ಯಕರ್ತರು ಇದೇ ಉತ್ಸಾಹದಿಂದ ನಮ್ಮ ಜೊತೆ ಇರುವುದಾದರೆ ಮಂಗಳವಾರ ಬೆಳಗ್ಗೆ 10:30ಕ್ಕೆ ನಾಮಪತ್ರ ಸಲ್ಲಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಹನುಮಂತಪ್ಪ. ಹಳ್ಳಿಕೇರಿ ರಾಜಪ್ಪ, ಮಾಜಿ ಉಪಾದ್ಯಕ್ಷ ದೊಡ್ಡಜ್ಜರ ಹನುಮಂತಪ್ಪ, ಮುಖಂಡ ಬಿ.ಕೆ.ಪ್ರಕಾಶ, ಪುರಸಭಾ ಸದಸ್ಯರಾದ ಎಂ.ವಿ.ಅಂಜಿನಪ್ಪ,ಗೊಂಗಡಿನಾಗರಾಜ, ವಕೀಲ ವೆಂಕಟೇಶ, ಉದ್ಧಾರ ಗಣೇಶ, ಅಬ್ದುಲ್ ರಹಿಮಾನ, ತಾಪಂ ಮಾಜಿ ಸದಸ್ಯರಾದ ಹುಲ್ಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ, ಚಂದ್ರೇಗೌಡ, ರೈತ ಸಂಘದ ಎಚ್. ಎಂ.ಮಹೇಶ್ವರಸ್ವಾಮಿ, ತೆಲಿಗಿ ಜಿಬಿಟಿ ಮಹೇಶ, ಉಮಾಕಾಂತ, ಗಣೇಶ, ಪುಷ್ಪಾ ದಿವಾಕರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಕಂಚಿಕೇರಿ ಜಯಲಕ್ಷ್ಮಿ, ಬಾಗ್ಯಮ್ಮ, ರತ್ನಮ್ಮ, ವಿಜಯಲಕ್ಷ್ಮಿ, ವನಜಾಕ್ಷಮ್ಮ, ನಂದಿಬೇವೂರು ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮೀ ಚಂದ್ರಶೇಖರ, ತಾಪಂ ಮಾಜಿ ಸದಸ್ಯ ನೀಲಪ್ಪ ಇತರರು ಹಾಜರಿದ್ದರು.