ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಒತ್ತಾಯ

ಲಿಂಗಸೂಗೂರು.ನ.೨೨-ಕಿಲ್ಲಾರಹಟ್ಟಿ ಗ್ರಾಮದಲ್ಲಿ ದಲಿತ ವ್ಯಕ್ತಿ ಬೈಲಪ್ಪನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಜಾತಿವಾದಿ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಹಟ್ಟಿಚಿನ್ನದಗಣಿ ಪ.ಜಾತಿ ಮತ್ತು ಪ.ಪಂಗಡ ನೌಕರರ ಸಂಘದ ಪದಾಧೀಕಾರಿಗಳು ಒತ್ತಾಯಿಸಿದ್ದಾರೆ.
ಈ ಕುರಿತು ಹಟ್ಟಿ ಪೊಲೀಸ್ ಠಾಣೆ ಸರ್ಕಲ್ ಇನಸ್ಪೆಕ್ಟರ್ ಪ್ರಕಾಶ್ ಮಾಳಿ ಮುಖಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಭಾನುವಾರ ಮನವಿ ಸಲ್ಲಿಸಿದ ನೌಕರರ ಸಂಘದ ಅಧ್ಯಕ್ಷ ಜಮದಗ್ನಿ ಕೋಠಾ ಹಾಗೂ ವಿಜಯ, ಕೆಂಚಪ್ಪ ಮಾಚನೂರು, ನಾಗಪ್ಪ ಕಟ್ಟಿಮನಿಯವರು, ಬೈಲಪ್ಪರ ಅಪ್ರಾಪ್ತ ಮಗಳನ್ನು ಅಪಹರಿಸಿರುವ ಕುರಿತು ಮುದಗಲ್ ಠಾಣೆಗೆ ದೂರು ಸಲ್ಲಿಸಿದರೂ ಕೂಡಾ ಪ್ರಕರಣ ದಾಖಲಿಸದೆ ನಿರ್ಲಕ್ಷ ತೋರಿದ ಠಾನೆ ಪಿಎಸೈ, ಎಎಸೈ ಅವರನ್ನು ಕೂಡಲೆ ಅಮಾನತ್ತುಗೊಳಿಸಬೇಕು. ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ದಲಿತರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.