ತಪ್ಪಾಗಿದ್ದರೆ ಶಿಕ್ಷೆಯಾಗಲಿ: ಸಿಎಂ

ಬೆಂಗಳೂರು,ಮಾ.೩ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿರುವ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆಯಾಗಲಿದ್ದು, ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಲೋಕಾಯುಕ್ತ ಪುನರ್ ಸ್ಥಾಪನೆ ಮಾಡಿರುವುದೇ ಭ್ರಷ್ಟಾಚಾರ ತಡೆಯೋಕೆ. ಹಿಂದೆ ಲೋಕಾಯುಕ್ತ ಇಲ್ಲದೆ ಕಾಂಗ್ರೆಸ್ ಕಾಲದಲ್ಲಿ ಪ್ರಕರಣಗಳೆಲ್ಲ ಮುಚ್ಚಿ ಹೋದವು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.ಲೋಕಾಯುಕ್ತ ಸರ್ವ ಸ್ವತಂತ್ರವಾಗಿ ಕೆಲಸ ಮಾಡುತ್ತಿದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗುವಂತೆ ತನಿಖೆ ನಡೆಯಲಿ ಎಂದರು.ಕಾಂಗ್ರೆಸ್‌ನ ಶಿವಕುಮಾರ್, ಭ್ರಷ್ಟಾಚಾರದ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ, ಅವರ ಕಾಲದ ಹಗರಣಗಳನ್ನು ತನಿಖೆ ಮಾಡಲಿ. ಯಾವ ಯಾವ ಹಗರಣ ಇದೆ ಎಂದು ಗೊತ್ತಾಗುತ್ತೆ. ನಾವು ಯಾರನ್ನು ರಕ್ಷಣೆ ಮಾಡಲ್ಲ ಎಂದರು.
ಕಾಂಗ್ರೆಸ್ ಆಡಳಿತದಲ್ಲಿ ಲೋಕಾಯುಕ್ತದಲ್ಲಿ ೫೯ ಪ್ರಕರಣ ದಾಖಲಾಗಿತ್ತು. ಅದನ್ನು ಮುಚ್ಚಿಹಾಕಿ ಎಸಿಬಿ ರಚನೆ ಮಾಡಿದರು. ಈಗ ಇವರು ಲೋಕಾಯುಕ್ತದ ಬಗ್ಗೆ ಮಾತನಾಡುವುದು ಎಷ್ಟರಮಟ್ಟಿಗೆ ಸರಿ ಎಂದರು.
ಎಸಿಬಿ ಇದ್ದಾಗ ಹಲವು ಪ್ರಕರಣ ಮುಚ್ಚಿ ಹೋಗಿವೆ. ಆ ಪ್ರಕರಣ ಎಲ್ಲ ತನಿಖೆಯಾಗಬೇಕು. ಅದನ್ನೂ ನಾವು ಲೋಕಾಯುಕ್ತಕ್ಕೆ ಕೊಡುತ್ತಿದ್ದೇವೆ. ಅಬಕಾರಿ ಹಾಗೂ ಕಾರ್ಮಿಕ ಹಗರಣ ಕೂಡ ತನಿಖೆ ಮಾಡಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.