ತಪ್ಪದೇ ಲಸಿಕೆ ಹಾಕಿಸಿಕೊಳ್ಳಿ

ಬ್ಯಾಡಗಿ, ಜೂ 4: ಮಹಾಮಾರಿ ಕೊರೋನಾ ಎರಡನೇ ಅಲೆಯು ರಾಜ್ಯದಲ್ಲಿ ಬಿರುಗಾಳಿ ಸೃಷ್ಟಿಸಿದ್ದು, ಇದರ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರವು ಜಾರಿಗೆ ತಂದ ಲಾಕ್’ಡೌನ್ ಆದೇಶವನ್ನು ಪ್ರತಿಯೊಬ್ಬರೂ ಪರಿಪಾಲಿಸಿ ತಪ್ಪದೇ ಲಸಿಕೆಯನ್ನು ಹಾಕಿಸಿಕೊಳ್ಳಬೇಕೆಂದು ತಾಲೂಕಿನ ಕಾರ್ಮಿಕ ನಿರೀಕ್ಷಕ ಪಿ.ಜಿ.ಬಾಲಾಜಿರಾವ್ ಕರೆ ನೀಡಿದರು.

ಪಟ್ಟಣದ ತಾಲೂಕ ಪಂಚಾಯತ ಸಭಾಭವನದಲ್ಲಿ ಗುರುವಾರ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಮತ್ತು ಅಸಂಘಟಿತ ಕಾರ್ಮಿಕರಿಗೆ ಕೋವಿಡ್-19 ಲಸಿಕೆಯನ್ನು ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬ ಕಾರ್ಮಿಕರು ತಾವು ಕೆಲಸ ಸ್ಥಳದಲ್ಲಿ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಂಡು ಕಾರ್ಯ ನಿರ್ವಹಿಸಬೇಕಲ್ಲದೆ ಆಗಾಗ ಸ್ಯಾನಿಟೈಸರ್ ಅನ್ನು ಕೈಗಳಿಗೆ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಕಾರ್ಮಿಕರಿಗೆ ಲಸಿಕೆಯನ್ನು ಹಾಕಿಸಲಾಯಿತು. ಕಾರ್ಮಿಕ ಬಂಧು ಮಂಜುನಾಥ್ ಪೂಜಾರ ರವಿಚಂದ್ರ ಮೇಟಿ. ಲಲಿತ ಗಾಜಿಯವರ. ಪಾಂಡುರಂಗ ಸುತಾರ, ರಾಘವೇಂದ್ರ ಬಾರ್ಕಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.