ತಪಾಸಣೆಯಿಂದ ಕೊರೊನಾ ನಿಯಂತ್ರಣ ಸಾಧ್ಯ-ಮಹೇಶ್

ವಿಜಯಪುರ.ನ೧೨:ಕೊರೊನಾ ತಪಾಸಣೆ ಹೆಚ್ಚು-ಹೆಚ್ಚಾಗಿ ನಡೆಸುವುದರಿಂದ ಸೋಂಕಿತರನ್ನು ಚಿಕಿತ್ಸೆಗೊಳಪಡಿಸಿ, ರೋಗ ಹಬ್ಬದಂತೆ ನಿಯಂತ್ರಿಸುವುದರಿಂದ ಕೊರೊನಾ ನಿಯಂತ್ರಣ ಸಾಧ್ಯವಾಗುತ್ತದೆ ಎಂದು ಪುರಸಭಾ ಪರಿಸರ ಅಭಿಯಂತರರಾದ ಮಹೇಶ್ ತಿಳಿಸಿದರು.
ಅವರು ಪುರಸಭೆ ಹಾಗೂ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಪಟ್ಟಣದ ೯ ನೇ ವಾರ್ಡ್‌ನ ಮಂಡಿಬೆಲೆ ರಸ್ತೆಯ ಇಸ್ಲಾಂ ನಗರದ ಅಂಗನವಾಡಿ ಕೇಂದ್ರದಲ್ಲಿ ಬುಧವಾರದಂದು ನಡೆದ ಕೊರೊನಾ ತಪಾಸಣಾ ಕಾರ್ಯಕ್ರಮದಲ್ಲಿ ವರದಿಗಾರರೊಂದಿಗೆ ಮಾತನಾಡಿದರು.
ಪುರಸಭಾ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್ ಕುಮಾರ್ ಮಾತನಾಡಿ, ಸರಕಾರದ ಮುಖ್ಯ ಕಾರ್ಯದರ್ಶಿಗಳ ಸೂಚನೆಯಂತೆ ಆರೋಗ್ಯ ಇಲಾಖೆಯೊಂದಿಗೆ ಪುರಸಭೆಯು ಕೈಜೋಡಿಸಿದ್ದು, ಪುರಸಭಾ ಸಿಬ್ಬಂದಿ ವರ್ಗದವರು ಕೊರೊನಾ ಸೋಂಕಿತ ವ್ಯಕ್ತಿಗಳ ಸುತ್ತಮುತ್ತಲ ಮನೆಗಳವರು ಹಾಗೂ ಪ್ರಾಥಮಿಕ ಸಂಪರ್ಕಿತರುಗಳನ್ನು ಗುರುತಿಸಿ, ತಪಾಸಣಾ ಕೇಂದ್ರಕ್ಕೆ ಕರೆದುಕೊಂಡು ಬರುತ್ತಿರುವರೆಂದು ಸಾರ್ವಜನಿಕರು ಸಿಬ್ಬಂದಿಯೊಂದಿಗೆ ಸಹಕರಿಸಬೇಕೆಂದು ತಿಳಿಸಿದರು.
ಪುರಸಭಾ ಆರೋಗ್ಯಾಧಿಕಾರಿ ಉದಯ್ ಶಂಕರ್‌ರಾವ್, ಜಗದೀಶ್, ಅಂಗನವಾಡಿ ಕಾರ್ಯಕರ್ತೆ ಭಾಗ್ಯಮ್ಮ, ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ಸಹಾಯಕರಾದ ಕುಮಾರಿ, ಮಮತ, ನವೀನ್, ನೇತ್ರ ತಪಾಸಕರಾದ ವೀಣಾ, ಲ್ಯಾಬ್ ಟೆಕ್ನಿಷಿಯನ್ ಕಲಾ, ಸುಮರವರುಗಳು ಇದ್ದರು.