ತನಿಖೆಗೆ ಆಗ್ರಹಿಸಿ ಪ್ರತಿಭಟನೆ

ಲಕ್ಷ್ಮೇಶ್ವರ,ಜು.22: ತಾಲೂಕಿನ ಸೂರಣಗಿ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ, ದುರಾಡಳಿತ, ದೌರ್ಜನ್ಯ, ಮಾಹಿತಿ ಕದ್ದಾಲಿಕೆ ಸೇರಿದಂತೆ ಅನೇಕ ಚಟುವಟಿಕೆಗಳು ನಡೆದಿದ್ದು ತನಿಖೆ ನಡೆಸುವಂತೆ ಗ್ರಾಮ ಪಂಚಾಯಿತಿ ಸದಸ್ಯರೇ ಆಡಳಿತ ವೈಖರಿಯನ್ನು ವಿರೋಧಿಸಿ ಪಂಚಾಯತಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಘಟನೆ ಜರುಗಿದೆ.
ಗ್ರಾಮ ಪಂಚಾಯಿತಿ ಸದಸ್ಯ ಪ್ರವೀಣ ಸೂರಣಗಿ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಿರುವ ದೂರಿನಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಸಮರ್ಪಕ ಮಾಹಿತಿಗಳನ್ನು ನೀಡುತ್ತಿಲ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷರ ಪತಿ ದೌರ್ಜನ್ಯ ಎಸಗುತ್ತಿದ್ದು ಸಾರ್ವಜನಿಕರು ಯಾವುದೇ ಮಾಹಿತಿ ಕೇಳಿದರೂ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದು ಅನೇಕ ಅವ್ಯವಹಾರಗಳು ಜರುಗಿದ್ದು ಕೂಲಂಕುಶ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗ್ರಾಮ ಪಂಚಾಯಿತಿಗೆ ಬರುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಪ್ರತಿಭಟನೆಯಲ್ಲಿ ಶಿವಾನಂದ ಲಮಾಣಿ, ರಾಜಶೇಖರ ಮೇಲ್ಮುರಿ, ಪ್ರಕಾಶ ಕಳ್ಳಿಹಾಳ, ಅರ್ಜುನ ಕಾರಬಾರಿ, ತುಕ್ಕಪ್ಪ ಪೂಜಾರ ಭಾಗವಹಿಸಿದ್ದರು.