ತನಿಖಾ ಸಂಸ್ಥೆಗಳ ದುರ್ಬಳಕೆ

ನವದೆಹಲಿ,ಮಾ.೫-ಕೇಂದ್ರ ಸರ್ಕಾರ ಪ್ರತಿಪಕ್ಷಗಳ ನಾಯಕರುಗಳನ್ನು ಅಣಿಯಲು ಸಿಬಿಐ, ಇಡಿ, ಆದಾಯ ತೆರಿಗೆ ಇಲಾಖೆಗಳನ್ನು ಬಳಸಿಕೊಳ್ಳುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿರುವಾಗಲೇ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ವಿವಿಧ ರಾಜಕೀಯ ಪಕ್ಷಗಳ ನಾಯಕರುಗಳು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಬಹಿರಂಗವಾಗಿಯೇ ಕೇಂದ್ರದ ನಡೆಯ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪ್ರತಿಪಕ್ಷಗಳ ನಾಯಕರುಗಳ ದನಿ ಅಡಗಿಸಲು ಸಿಬಿಐ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆಯಂತಹ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಿಯಲ್ಲ ಎಂದು ಭಾರತ್ ರಾಷ್ಟ್ರ ಸಮಿತಿ ನ್ಯಾಷನಲ್ ಕಾನ್ಫರೆನ್ಸ್, ತೃಣಮೂಲ ಕಾಂಗ್ರೆಸ್, ಎನ್‌ಸಿಪಿ, ಶಿವಸೇನೆ, ಸಮಾಜವಾದಿ ಪಕ್ಷ, ಆರ್‌ಜೆಡಿ, ಆಮ್‌ಆದ್ಮಿ ಪಕ್ಷ, ಸೇರಿದಂತೆ ೮ ವಿಪಕ್ಷಗಳ ನಾಯಕರುಗಳು ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಭಾರತ ಇನ್ನೂ ಪ್ರಜಾಪ್ರಭುತ್ವ ರಾಷ್ಟ್ರ ಎಂದು ನೀವು ಒಪ್ಪುತ್ತೀರಿ ಎಂದು ನಾವು ಭಾವಿಸಿದ್ದೇವೆ. ವಿರೋಧ ಪಕ್ಷದ ನಾಯಕರುಗಳ ವಿರುದ್ಧ ಕೇಂದ್ರೀಯ ಸಂಸ್ಥೆಗಳ ದುರ್ಬಳಕೆ ಪ್ರಜಾಪ್ರಭುತ್ವದಿಂದ ನಿರಂಕುಶಾಧಿಕಾರಕ್ಕೆ ಪರಿವರ್ತನೆಯಾಗಿದ್ದೇವೆ ಎಂಬುದನ್ನು ಸೂಚಿಸುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ದೆಹಲಿಯ ಉಪಮುಖ್ಯಮಂತ್ರಿಯಾಗಿದ್ದ ಮನೀಷ್‌ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿರುವ ಹಿನ್ನೆಲೆಯಲ್ಲಿ ೮ ಪಕ್ಷದ ನಾಯಕರುಗಳು ಪ್ರಧಾನಿಗೆ ಪತ್ರ ಬರೆದು ಕೇಂದ್ರದ ನಿಲುವಿನ ವಿರುದ್ಧ ಹರಿಹಾಯ್ದಿದ್ದಾರೆ,
ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದನ್ನು ಖಂಡಿಸಿ ಪ್ರಧಾನಿಗೆ ಬರೆದಿರುವ ಪತ್ರಕ್ಕೆ ಭಾರತ್ ರಾಷ್ಟ್ರ ಸಮಿತಿ ಅಧ್ಯಕ್ಷ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್, ಎನ್‌ಸಿಪಿ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್, ಆರ್‌ಜೆಡಿ ಪಕ್ಷದ ಮುಖ್ಯಸ್ಥ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ಯಾದವ್, ಪಂಜಾಬ್ ಮುಖ್ಯಮಂತ್ರಿ ಭಗವಂತಮಾನ್, ಎನ್‌ಸಿಪಿ ಮುಖ್ಯಸ್ಥ ಶರದ್‌ಪವಾರ್, ಶಿವಸೇನಾ ಮುಖ್ಯಸ್ಥ ಉದ್ಧವ್‌ಠಾಕ್ರೆ, ಜಮ್ಮು-ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರುಕ್‌ಅಬ್ದುಲ್ಲಾ ಇವರುಗಳು ಸಹಿ ಮಾಡಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಆಡಳಿತ ಬಂದ ನಂತರ ತನಿಖಾ ಸಂಸ್ಥೆಗಳಿಂದ ದಾಳಿಗೊಳಗಾಗಿ, ವಿಚಾರಣೆಗೊಳಪಟ್ಟ ಹಾಗೂ ಬಂಧಿಸಲ್ಪಟ್ಟ ರಾಜಕಾರಣಿಗಳೆಲ್ಲ ವಿರೋಧ ಪಕ್ಷಕ್ಕೆ ಸೇರಿದವರಾಗಿದ್ದಾರೆ. ಈ ರೀತಿ ದಾಳಿಗೊಳಗಾದ ನಾಯಕರುಗಳು ಬಿಜೆಪಿ ಸೇರ್ಪಡೆಯಾದ ನಂತರ ಅವರ ವಿರುದ್ಧದ ಪ್ರಕರಣಗಳ ತನಿಖೆಯೇ ಸ್ಥಗಿತಗೊಂಡಿದೆ ಎಂದು ಈ ನಾಯಕರುಗಳು ಪತ್ರದಲ್ಲಿ ಹೇಳಿದ್ದಾರೆ.
ತನಿಖಾ ಸಂಸ್ಥೆಗಳ ದಾಳಿಗೊಳಗಾಗಿ ಬಂಧಿಸಲ್ಪಟ್ಟ ನಾಯಕರುಗಳು ಬಿಜೆಪಿ ಸೇರಿದ ನಂತರ ಅವರುಗಳಿಗೆ ಒಳ್ಳೆ ಸ್ಥಾನಮಾನಗಳೂ ಸಿಕ್ಕಿವೆ. ಅವರುಗಳ ವಿರುದ್ಧದ ಪ್ರಕರಣ ತನಿಖೆಯೂ ಮುಂದುವರೆದಿಲ್ಲ ಎಂದು ಹೇಳಿ ಈ ರೀತಿ ದಾಳಿಗೊಳಗಾಗಿ ಬಿಜೆಪಿ ಸೇರಿದ ನಾಯಕರುಗಳ ಹೆಸರುಗಳನ್ನು ಈ ಪತ್ರದಲ್ಲಿ ವಿರೋಧ ಪಕ್ಷಗಳ ನಾಯಕರುಗಳು ಉಲ್ಲೇಖಿಸಿದ್ದಾರೆ.

ಬಿಜೆಪಿಗೆ ಸೇರ್ಪಡೆಗೊಂಡವರ ವಿರುದ್ದ ತನಿಖೆ ಇಲ್ಲ
ಅನ್ಯ ಪಕ್ಷಗಳಿದ್ದು ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳಿಂದ ದಾಳಿಗೆ ಒಳಗಾಗಿ ಬಿಜೆಪಿ ಸೇರಿದ ನಾಯಕರ ವಿರುದ್ದ ಯಾವುದೇ ತನಿಖೆ ಕೈಗೊಳ್ಳುತ್ತಿಲ್ಲ. ಬದಲಾಗಿ ಅವರ ಪ್ರಕರಣ ಮುಚ್ಚಿ ಹಾಕಲಾಗುತ್ತಿದೆ ಎಂದು ೮ ಪಕ್ಷಗಳ ನಾಯಕರು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಮಾಜಿ ನಾಯಕ ಮತ್ತು ಪ್ರಸ್ತುತ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರನ್ನು ೨೦೧೪ ಮತ್ತು ೨೦೧೫ ರಲ್ಲಿ ಸಿಬಿಐ ಮತ್ತು ಇಡಿ ತನಿಖೆ ನಡೆಸಿತ್ತು. ಚಿಟ್ ಫಂಡ್ ಹಗರಣ. ಆದರೆ, ಅವರು ಬಿಜೆಪಿ ಸೇರಿದ ನಂತರ ಪ್ರಕರಣ ಪ್ರಗತಿ ಕಾಣಲಿಲ್ಲ ಎಂದು ದೂರಿದ್ಧಾರೆ.
ಅದೇ ರೀತಿ ಬಿಜೆಪಿ ಸೇರಿದ ಮಾಜಿ ಟಿಎಂಸಿ ನಾಯಕರಾದ ಸುವೇಂದು ಅಧಿಕಾರಿ ಮತ್ತು ಮುಕುಲ್ ರಾಯ್ ಅವರು ನಾರದ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಇಡಿ ಮತ್ತು ಸಿಬಿಐ ವಿಚಾರಣೆಗೆ ಎದುರಿಸಿದ್ದರು ಅವರು ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿಗೆ ಸೇರಿದ ನಂತರ ಪ್ರಕರಣಗಳು ಪ್ರಗತಿಯಾಗಲಿಲ್ಲ. ಮಹಾರಾಷ್ಟ್ರದ ನಾಯಕ ನಾರಾಯಣ ರಾಣೆ ಸೇರಿದಂತೆ ಅನೇಕ ಉದಾಹರಣೆಗಳಿವೆ ಅವರನ್ನು ಕೇಂದ್ರದಲ್ಲಿ ಮಂತ್ರಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.