ತತ್ವಾದರ್ಶಗಳ ಬೋಧನೆ ಬಿಡಿ, ಆಚರಣೆಗೆ ತನ್ನಿ: ಬಿ.ಆರ್.ಬನಸೋಡೆ

ವಿಜಯಪುರ, ಏ.6-ಬಸವಣ್ಣನು ನಮ್ಮ ನಿಮ್ಮಂತೆ ಒಬ್ಬ ಸಾಮಾನ್ಯ ಮನುಷ್ಯ. ಆತನು ಪೌರಾಣಿಕ ವ್ಯಕ್ತಿಯಲ್ಲ, ದೇವರೂ ಅಲ್ಲ.ಆದರೆ ತನ್ನ ಅಸಾಮಾನ್ಯ ವಿಚಾರಗಳಿಂದ ದೇವಮಾನವನಂತೆ ರೂಪುಗೊಂಡ. ಇತಿಹಾಸದ ಪುಟಗಳಲ್ಲಿ ಕ್ರಾಂತಿಪುರುಷನೆಂದೇ ದಾಖಲಾಗಿ ಹೋದ ಮಹಾನ್ ಕ್ರಾಂತಿಸಂತ. ಬುದ್ಧನ ಪ್ರಭಾವ ಬಸವಣ್ಣನ ವಚನಗಳಲ್ಲಿ ಎದ್ದು ಕಾಣುತ್ತದೆ. ನಾವು ಮೊದಲು ಈ ತತ್ವಾದರ್ಶಗಳ ಉಪದೇಶ ಮಾಡುವುದು ಬಿಟ್ಟು ನಮ್ಮ ರೂಢಿಯಲ್ಲಿ ತರಬೇಕಿದೆ.ಅದರ ಅಭಾವದಿಂದಲೇ ನಮ್ಮ ಸುತ್ತಲೂ ಅಶಾಂತಿ, ಗಲಭೆಗಳು ನಡೆಯಲು ಕಾರಣ ಎಂದು ಸಹಕಾರಿ ಇಲಾಖೆಯ ನಿವೃತ್ತ ಉಪನಿರ್ದೇಶಕ ಬಿ.ಆರ್.ಬನಸೋಡೆ ಅಭಿಪ್ರಾಯಪಟ್ಟರು.
ಅವರು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ರವಿವಾರ ಸಂಜೆ ನಗರದ ಬಂಜಾರಾ ಕ್ರಾಸ್ ಬಳಿ ಇರುವ ಲಿಂಗಾಯತ ಭವನದಲ್ಲಿ ಹಮ್ಮಿಕೊಂಡ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ” ಬಸವಣ್ಣ ಹಾಗೂ ಶರಣರ ವಿಚಾರಗಳೇಕೆ ಇಂದಿಗೂ ಪ್ರಸ್ತುತ ” ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಶಸಾಪ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಮಾತನಾಡಿ, ವೀರಶೈವ ಮಹಾಸಭಾ ಹಾಗೂ ಶಸಾಪ ಒಂದೇ ಧ್ಯೇಯೋದ್ದೇಶಗಳನ್ನು ಹೊಂದಿರುವ ಸಂಸ್ಥೆಗಳಾಗಿವೆ. ಜಂಟಿಯಾಗಿ ಈ ಮಾಸಿಕ ಚಿಂತನ ಗೋಷ್ಠಿಯನ್ನು ಹಮ್ಮಿಕೊಳ್ಳುವ ಉದ್ದೇಶದ ಹಿಂದೆ ಶರಣರ ಸಂದೇಶಗಳನ್ನು ಹಾಗೂ ವೈಚಾರಿಕ, ವೈಜ್ಞಾನಿಕ ವಿಚಾರಗಳನ್ನು ಇಂದಿನ ಹಾಗೂ ಮುಂದಿನ ಪೀಳಿಗೆಗೆ ತಲುಪಿಸುವುದೇ ಆಗಿದೆ. ನಿರಂತರವಾಗಿ ಗೋಷ್ಠಿಗಳನ್ನು ಆಯೋಜಿಸುತ್ತಾ ಸಮಾಜವನ್ನು ಆದರ್ಶದ ಹಾದಿಯಲ್ಲಿ ಜೀವಂತವಾಗುಡುವಲ್ಲಿ ಶ್ರಮವಹಿಸುತ್ತೇವೆ ಎಂದು ನುಡಿದರು.
ಸಾನ್ನಿಧ್ಯ ವಹಿಸಿದ್ದ ಶಿವಬಸವ ಯೋಗಾಶ್ರಮದ ಶಂಭುಲಿಂಗ ಸ್ವಾಮೀಜಿ ಮಾತನಾಡಿ, ಹನ್ನೆರಡನೆಯ ಶತಮಾನದ ವಚನಕಾರರು ತಾವು ಮಾಡಿದ ಕ್ರಾಂತಿಯನ್ನು ವಚನಗಳಲ್ಲಿ ಹಿಡಿದಿಟ್ಟು ನಮಗೆ ಉಳಿಸಿ ಹೋಗಿರುವುದೇ ಒಂದು ದೊಡ್ಡ ಪುಣ್ಯ ಮತ್ತು ನಮಗೆ ಸಿಕ್ಕ ಅಮೂಲ್ಯ ಕೊಡುಗೆಯಾಗಿದೆ. ಎಲ್ಲಿಯವರೆಗೆ ನಮ್ಮ ವ್ಯವಸ್ಥೆಯಲ್ಲಿ ಅನಾಚಾರ, ಅನೀತಿ, ಅಂಧಕಾರ ಇರುತ್ತದೆಯೋ ಅಲ್ಲಿಯವರೆಗೆ ಶರಣರ ವಿಚಾರಗಳು ನಮಗೆ ಪ್ರಸ್ತುತವೇ ಆಗಿರುತ್ತವೆ. ಸಂಪೂರ್ಣವಾಗಿ ಅವುಗಳನ್ನು ಅರ್ಥೈಸಿಕೊಂಡು ನಿತ್ಯ ಜೀವನದಲ್ಲಿ ಜಾರಿತಂದಾಗ ಮಾತ್ರ ಸಾರ್ಥಕ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ವಿ.ಸಿ.ನಾಗಠಾಣ, ಮಾತನಾಡಿ, ಎನಗಿಂತ ಕಿರಿಯರಿಲ್ಲ ಎಂದು ಬಸವಣ್ಣ ಬಹುದೊಡ್ಡವರಾದರು. ನಾವೆಲ್ಲರೂ ನಾವೇ ದೊಡ್ಡವರು ಎಂದು ಮೆರೆಯುತ್ತಿದ್ದೇವೆ. ಸರಳ ಜೀವನ ಹಾಗೂ ನೀತಿಮಾರ್ಗದಲಿ ನಡೆಯುವ ಸಂಕಲ್ಪ ನಮ್ಮದಾಗಲಿ ಎಂದು ನುಡಿದರು. ಗೋಷ್ಠಿಯ ಸಂಚಾಲಕರಾದ ರಾಜೇಂದ್ರಕುಮಾರ್ ಬಿ.ಬಿರಾದಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯ ಮೇಲೆ ವೀರಶೈವ ಮಹಾಸಭಾದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಡಾ.ಬನೂದೇವಿ ಸಂಕಣ್ಣವರ, ಮಹಿಳಾ ಕದಳಿ ವೇದಿಕೆಯ ಜಿಲ್ಲಾಧ್ಯಕ್ಷೆ ಡಾ.ಉಷಾದೇವಿ ಹಿರೇಮಠ, ವೀರಶೈವ ಮಹಾಸಭಾದ ವಿಜಯಪುರ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಸೋಮಶೇಖರ ವಾಲಿ ಉಪಸ್ಥಿತರಿದ್ದರು.
ಈ ಸಭೆಯಲ್ಲಿ ವಿ.ಡಿ.ಐಹೊಳ್ಳಿ, ಜಿ.ಎನ್.ತೆಗ್ಗೆಳ್ಳಿ, ಭಾರತಿ ಭುಯ್ಯಾರ, ಕಮಲಾಕ್ಷಿ ಗೆಜ್ಜಿ, ಉದಯ ಹಿರೇಮಠ, ವಿದ್ಯಾವತಿ ಅಂಕಲಗಿ, ಕೆ.ಎಫ್.ಅಂಕಲಗಿ, ಸಂಗಮೇಶ ಬದಾಮಿ, ಸುಭಾಸ ಯಾದವಾಡ, ರವೀಂದ್ರ ಮೇಡೇಗಾರ, ಎಂ.ಎಂ.ಅವರಾದಿ, ಸುವರ್ಣ ಕುರ್ಲೆ, ಶರಣಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.
ಎ.ಎಸ್.ಕೋರಿ ಪ್ರಾರ್ಥಿಸಿದರು. ಎಂ.ಜಿ.ಯಾದವಾಡ ಸ್ವಾಗತಿಸಿದರು. ರಾಜೇಂದ್ರ ಬಿರಾದಾರ್ ವಂದಿಸಿದರು.