ತತ್ತರಿಸಿದ ಜನರು – ಸಂಸದರು, ಶಾಸಕರು, ನಗರಸಭೆ ಅಧ್ಯಕ್ಷರು, ಸದಸ್ಯರ ವಿರುದ್ಧ ಕೆಂಡಾಮಂಡಲ

ರಾತ್ರಿಯಿಡೀ ಭಾರೀ ಸಿಡಿಲು, ಮಿಂಚು, ಮಳೆ : ಅನೇಕ ಬಡಾವಣೆಗಳು ಬಡಾವಣೆಗಳು ಜಲಾವೃತ

 • ರಾಯಚೂರು.ಅ.೦೯- ಇದು ನಮ್ಮ ನಗರ … ಇಲ್ಲಿ ವಾಸಿಸುವ ಜನರ ಜೀವನಕ್ಕೆ ಬೆಲೆಯೇ ಇಲ್ಲವೇ?. ಇಲ್ಲಿ ಜನಪ್ರತಿನಿಧಿಗಳು ಕೇವಲ ಮತಗಳಂತೆ ಕಾಣುವುದು ಬಿಟ್ಟರೇ, ಇಲ್ಲಿಯ ನಿವಾಸಿಗಳನ್ನು ಮನುಷ್ಯರಂತೆ ನೋಡುವ ಕನಿಷ್ಟ ಕಾಳಜಿ ಇಲ್ಲದೇ ಇರುವುದರಿಂದ ಮಳೆ ಬಂದ ಪ್ರತಿ ಸಲ ಮನೆಗಳಿಗೆ ನೀರು ನುಗ್ಗಿ, ಜನರು ಭಾರೀ ನಷ್ಟಕ್ಕೆ ಗುರಿಯಾಗುವುದು ಸಾಮಾನ್ಯವಾಗಿದೆ.
  ನಿನ್ನೆ ರಾತ್ರಿ ಭಾರೀ ಗುಡುಗು, ಸಿಡಿಲು ಮಿಶ್ರಿತ ಮಳೆಯಿಂದ ನಗರದ ಜನ ಜರ್ಜರಿತಗೊಂಡಿದ್ದಾರೆ. ಕೊಳಚೆ ಪ್ರದೇಶಗಳು ಮಾತ್ರವಲ್ಲ ಸುಸಜ್ಜಿತ ಬಡಾವಣೆಯ ಜನರು ಸಹ ಮಳೆ ನೀರಿನಿಂದ ಜಲಾವೃತಗೊಂಡು ಸರ್ಕಾರ, ಸ್ಥಳೀಯ ಆಡಳಿತ, ಸಂಸದರು, ಶಾಸಕರು ಮತ್ತು ಆಯಾ ವಾರ್ಡಿನ ಜನಪ್ರತಿನಿಧಿಗಳಿಗೆ ಅತ್ಯಂತ ಕೆಟ್ಟ ಪದಗಳಿಂದ ವಾಮಾಗೋಚರವಾಗಿ ಬೈಯ್ದು ತಮ್ಮ ಆಕ್ರೋಶ ತೀರಿಸಿಕೊಂಡರು. ಈ ನಗರದ ಜನರಿಗೆ ಯಾವುದೇ ಸೌಕರ್ಯ ಒದಗಿಸಿದ ಇಂತಹ ಜನಪ್ರತಿನಿಧಿಗಳು ಇರುವುದಾದರೂ ಏಕೆ ಎನ್ನುವ ಪ್ರಶ್ನೆಯೂ ಜನ ತಮ್ಮನ್ನು ತಾವು ಕೇಳಿಕೊಳ್ಳುವಂತಹ ಆವೇಷಕ್ಕೆ ಗುರಿಯಾದರು.
  ರಾತ್ರಿಯಿಡೀ ಜಾಗರಣೆ ಮಾಡಿ, ಭಾರೀ ಪ್ರಮಾಣದಲ್ಲಿ ಮನೆಗಳಿಗೆ ನುಗ್ಗುತ್ತಿರುವ ನೀರು ಬಕೇಟ್, ಜಗ್ಗು ಮತ್ತು ಇನ್ನಿತರ ಸಲಕರಣೆ ಮೂಲಕ ಎತ್ತಿ ಹೊರ ಹಾಕಿದ ನೋವು, ತಮ್ಮನ್ನು ನೋಡಲು ಬಂದ ಜನಪ್ರತಿನಿಧಿಗಳ ಮುಂದೆ ಕಕ್ಕಿದರು. ಕಳೆದ ಅನೇಕ ವರ್ಷಗಳಿಂದ ಪ್ರತಿ ಸಲ ಮಳೆ ಬಂದಾಗ ಇಂತಹ ಅವಾಂತರ ಘಟಿಸುತ್ತಿದ್ದರೂ, ಶಾಶ್ವತ ಪರಿಹಾರ ಒದಗಿಸುವ ಕನಿಷ್ಟ ಮಾನವೀಯತೆ ಪ್ರದರ್ಶಿಸದ ಈ ಸಂಸದರು, ಶಾಸಕರು, ನಗರಸಭೆ ಅಧ್ಯಕ್ಷರು, ಸದಸ್ಯರು ಇಲ್ಲಿವರೆಗೂ ಮಾಡಿದ್ದಾದರೂ ಏನು ಎನ್ನುವ ಪ್ರಶ್ನೆ ಜನರಿಂದ ಕೇಳಿ ಬಂದಿತ್ತು.
  ನಗರದ ಅಭಿವೃದ್ಧಿಗೆ ಕೋಟ್ಯಾಂತರ ರೂ. ಬಿಡುಗಡೆ ಮಾಡಲಾಗಿದೆಂದು ಹೇಳುವ ಜನಪ್ರತಿನಿಧಿಗಳೇ, ಜನರು ಜಲಾವೃತಗೊಂಡ ಬಡಾವಣೆಗಳಿಗೆ ಭೇಟಿ ನೀಡಿ, ಅಲ್ಲಿಯ ಬಡವರ ಬದುಕು ನೋಡಿ. ಮಳೆ ನಿಂತ ನಂತರ ನೀರು ನುಗ್ಗಿದ ಮನೆಗಳಿಗೆ ತೆರಳಿ, ಒಂದಷ್ಟು ಸಾಂತ್ವನ ಹೇಳುವ ನಾಟಕ ಬಿಟ್ಟ, ಈ ಜನರಿಗಾಗಿ ಮತ್ತೇ ಇಂತಹ ಘಟನೆಗಳು ನಡೆಯದಂತೆ ಪರಿಸ್ಥಿತಿಯನ್ನು ಶಾಶ್ವತವಾಗಿ ಪರಿಹರಿಸುವತ್ತ ಇನ್ನಾದರೂ ಗಮನ ಹರಿಸುತ್ತೀರಾ, ಇಲ್ಲವೇ ಕೇವಲ ಪರ್ಸೆಂಟೇಜ್ ರಾಜಕೀಯಕ್ಕೆ ಸೀಮಿತವಾಗಿ ಜನರನ್ನು ಶಿಕ್ಷಿಸುತ್ತೀರಾ ಎನ್ನುವುದು ನೊಂದ ಜನಗಳ ಧ್ವನಿಯಾಗಿತ್ತು.
  ಸಿಯಾತಲಾಬ್, ನೀರಬಾವಿಕುಂಟಾ, ಕಾಲಾತಲಾಬ್, ಇಂದಿರಾ ನಗರ, ಸೇರಿದಂತೆ ಅನೇಕ ಬಡಾವಣೆಗಳಲ್ಲಿ ನೀರಿನ ಪ್ರವಾಹಕ್ಕೆ ಜನ ಜೀವನ ಅಸ್ತವ್ಯಸ್ತಗೊಂಡಿತು. ಮನೆಗಳಲ್ಲಿ ೩ ರಿಂದ ೪ ಅಡಿ ನಿಂತ ನೀರಿನಲ್ಲಿ ರಾತ್ರಿಯೆಲ್ಲಾ ಕಳೆಯುವ ಇವರ ಬದುಕಿಗೆ ನಾಗರೀಕತೆ ನಾಚಿಕೊಳ್ಳುವಂತಿತ್ತು. ಒಂದೇ ಮಂಚದಲ್ಲಿ ತಾಯಿ, ಮೂವರು ಮಕ್ಕಳು ನಿದ್ದೆಯಿಲ್ಲದೇ, ನೀರಿನ ಮಟ್ಟ ಯಾವ ಎತ್ತರಕ್ಕೆ ಹೆಚ್ಚುತ್ತದೆಂಬ ಆತಂಕದಲ್ಲಿ ಕಳೆದ ಕ್ಷಣಗಳು ಈ ಸೋಕಾಲ್ಡ್ ಜನಪ್ರಿಯ ನಾಯಕರಿಗೆ ಮನವರಿಕೆಯಾಗುವುದೇ?.
  ಆಡಳಿತರೂಢ ಪಕ್ಷದ ಸಂಸದರು, ಶಾಸಕರ ನಿರ್ಲಕ್ಷ್ಯ ಒಂದೆಡೆಯಾದರೇ, ಇವರ ಈ ವ್ಯವಹಾರಗಳನ್ನು ಪ್ರಶ್ನಿಸಲು ತಾಕತ್ತಿಲ್ಲದ ಕಾಂಗ್ರೆಸ್ ಮತ್ತು ಜಾದಳ ದುರ್ಬಲ ನಾಯಕತ್ವದಿಂದ ನಗರದಲ್ಲಿ ಎಲ್ಲಾ ರಾಜಕೀಯ ಮುಖಂಡರು ಅಂತರ್ ಸಂಬಂಧಿಗಳು ಎಂಬ ಆಕ್ರೋಶವನ್ನು ತೋಡಿಕೊಂಡರು. ಭಾರೀ ಮಳೆಯಿಂದಾಗಿ ಮೇಲ್ಭಾಗದ ನೀರು ನೇರವಾಗಿ ಹರಿದು, ತೆಗ್ಗು ಪ್ರದೇಶಗಳಲ್ಲಿರುವ ಜನವಸತಿ ಪ್ರದೇಶಕ್ಕೆ ನುಗ್ಗುವುದು ನಿರಂತರವಾಗಿದೆ. ಈ ಸಮಸ್ಯೆ ನಿವಾರಿಸಲು ಚರಂಡಿಗಳು, ರಾಜ್ ಕಾಲುವೆ ಮತ್ತಿತರ ಪರಿಹಾರ ವ್ಯವಸ್ಥೆ ಅಗತ್ಯ.
  ಆದರೆ, ನಿನ್ನೆ ಸುರಿದ ಮಳೆಯ ನೀರು ಚರಂಡಿಗಿಂತ ಶೇ. ೮೦ ರಷ್ಟು ರಸ್ತೆಯ ಮೇಲೆ ಹರಿದಿರುವುದು ಇಲ್ಲಿಯ ನಗರಸಭೆಯ ಚರಂಡಿ ನಿರ್ವಹಣೆಯ ವ್ಯವಸ್ಥೆಯನ್ನು ಬಯಲಿಗಿಟ್ಟಿದೆ. ಜಿಲ್ಲಾಡಳಿತ ಸೇರಿದಂತೆ ಇನ್ನಿತರ ಸ್ಥಳೀಯ ಸಂಸ್ಥೆಗಳ ಅಧಿಕಾರ ವರ್ಗ ಕೇವಲ ಜನಪ್ರತಿನಿಧಿಗಳ ಕೈಗೊಂಬೆಗಳಂತೆ ವರ್ತಿಸಿ, ಪ್ರತಿ ಕೆಲಸದಲ್ಲಿ ಇಂತಿಷ್ಟು ಹಣದ ನಿರೀಕ್ಷೆ ಮಾಡುವುದು ಬಿಟ್ಟರೇ, ಜನರಿಗಾಗಿ ಏನನ್ನು ಮಾಡುವ ಹಾಗೂ ಜನರ ಸಮಸ್ಯೆಗೆ ಪರಿಹಾರ ಒದಗಿಸುವ ಕನಿಷ್ಟ ವ್ಯವಸ್ಥೆ ನಗರದಲ್ಲಿ ಇಲ್ಲ.
  ಸಿಯಾತಲಾಬ್, ಜಲಾಲ್ ನಗರ, ಜಹೀರಾಬಾದ್, ಎಲ್‌ಬಿಎಸ್ ನಗರ, ಸುಖಾಣಿ ಕಾಲೋನಿ ಸೇರಿದಂತೆ ಇನ್ನಿತರ ತೆಗ್ಗು ಪ್ರದೇಶಗಳಲ್ಲಿ ಜನವಸತಿ ಇರುವ ಮಾಹಿತಿಯಿದ್ದರೂ, ರಾತ್ರಿ ಭಾರೀ ಮಳೆ ಸುರಿದರೂ, ಈ ಬಗ್ಗೆ ಅಲ್ಲಿಯ ಜನರ ಪರಿಸ್ಥಿತಿ ಏನು ಎಂದು ನೋಡುವ ಯಾವುದೇ ವ್ಯವಸ್ಥೆ ನಗರಸಭೆ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಮಾಡದಿರುವುದು ಜನರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
  ಮಳೆ ನೀರು ನುಗ್ಗಿವಿಕೆಯಿಂದ ತೀವ್ರ ಅಸ್ತವ್ಯಸ್ತಕ್ಕೆ ಗುರಿಯಾದ ಬಡಾವಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಮುಂದೆ ಜನ ಭಾರೀ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಮಳೆಗಾಲದಲ್ಲಿ ಇದೇ ರೀತಿ ನೀರು ನುಗ್ಗಿದ ಸಂದರ್ಭದಲ್ಲಿ ಬೆರಳೆಣಿಕೆಯ ಜನರಿಗೆ ಹಣ ನೀಡಿ, ಉಳಿದವರಿಗೆ ನಯಾ ಪೈಸೆ ಬಿಡುಗಡೆ ಮಾಡದೇ, ವಂಚಿಸಲಾಗಿದೆ. ಪ್ರತಿ ವರ್ಷ ಮಳೆಯಿಂದ ಅನೇಕ ಸಲ ಈ ರೀತಿಯ ಮನೆಗೆ ನೀರು ನುಗ್ಗುವ ದುಸ್ಥಿತಿಗೆ ಗುರಿಯಾಗಬೇಕಾಗಿದೆ. ಇದನ್ನು ಶಾಶ್ವತವಾಗಿ ಪರಿಹರಿಸುವ ಕನಿಷ್ಟ ಕಾಳಜಿ ಇಲ್ಲಿಯ ಜನಪ್ರತಿನಿಧಿಗಳಿಗೆ ಇಲ್ಲವೆಂದು ತಮ್ಮ ನೋವು ತೋಡಿಕೊಂಡರು. ಇನ್ನಾದರೂ ಈ ನಾಯಕರು ಬಡವರಿಗೆ ನೆಮ್ಮದಿಯ ಜೀವನ ನಿರ್ವಹಿಸಲು ಶಾಶ್ವತ ಪರಿಹಾರಕ್ಕೆ ಮುಂದಾಗುವರೇ?.