ತಣಿಯದ ಕುತೂಹಲ ಸಾಧನೆಗೆ ಮೆಟ್ಟಿಲು: ಪ್ರಶಾಂತ ದೇವಣಿ

ಕಲಬುರಗಿ:ಫೆ.15: ವಿದ್ಯಾರ್ಥಿಗಳಲ್ಲಿ ತಣಿಯದ ಕುತೂಹಲ ಸದಾ ಜಾಗೃತವಾಗಿದ್ದರೆ ಮಾತ್ರ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅದ್ಭುತ ಸಾಧನೆ ಮಾಡಲು ಸಾಧ್ಯ ಎಂದು ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಸೀನಿಯರ್ ಸಿಸ್ಟಂ ಅನಾಲಿಸ್ಟ್ ಪ್ರಶಾಂತ ದೇವಣಿ ಕಿವಿಮಾತು ಹೇಳಿದರು.

ಇಲ್ಲಿನ ರಾಮಮಂದಿರ- ಹೈಕೋರ್ಟ್ ರಸ್ತೆಯ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕೋಡಿಂಗ್ ಎಕ್ಸ್ ಪೆÇೀ ಹಾಗೂ ವಿಶ್ವ ಕಂಪ್ಯೂಟರ್ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಕುತೂಹಲ ಇದ್ದಲ್ಲಿ ಮಾತ್ರ ಏನಾದರೂ ಸಾಧನೆ ಕೈಗೂಡುತ್ತದೆ ಎಂದರು.

ಈ ಹಿಂದೆ ಸಿ, ಸಿ++ ಮತ್ತು ಜಾವಾ ತಂತ್ರಾಂಶಗಳನ್ನು ಕಲಿಸಲಾಗುತ್ತಿತ್ತು. ಈಗ ಈ ತಂತ್ರಾಂಶಗಳನ್ನು ಒಗ್ಗೂಡಿಸಿದ ಪೈಥಾನ್ ತಂತ್ರಾಂಶದ ಮೂಲಕ ಕೋಡಿಂಗ್ ಕಲಿಸಲಾಗುತ್ತಿದೆ. ಮೇಲಾಗಿ, ಮಕ್ಕಳ ಮೆದುಳು ಅತ್ಯಂತ ಸೂಕ್ಷ್ಮಗ್ರಾಹಿ ಎಂಬ ವಾಸ್ತವದ ಆಧಾರದ ಮೇಲೆ ಇಂದು ಆರನೇ ತರಗತಿಯಿಂದಲೇ ಫೈಥಾನ್ ಆಧರಿತ ಕೋಡಿಂಗ್ ಕಲಿಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಇರುವ ಕುತೂಹಲ ಹಾಗೂ ಆಸಕ್ತಿಯೇ ಪ್ರಮುಖ ಕಾರಣ ಎಂದು ನುಡಿದರು.

ವಿವೇಕಾನಂದ ವಿದ್ಯಾ ನಿಕೇತನ ಶಾಲೆಯ ಪ್ರಾಂಶುಪಾಲ ಸಿದ್ದಪ್ಪ ಭಗವತಿ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ಜಗತ್ತಿನ ಅಗತ್ಯಕ್ಕೆ ಅನುಗುಣವಾಗಿ ಕಂಪ್ಯೂಟರ್ ಶಿಕ್ಷಣ ಮತ್ತು ಕೋಡಿಂಗ್, ಕೃತಕ ಬುದ್ಧಿಮತ್ತೆ ಹೆಚ್ಚು ಮಹತ್ವ ಪಡೆದುಕೊಂಡಿವೆ. ಈ ಕಾರಣಕ್ಕಾಗಿ ಶಾಲೆಯಲ್ಲಿ ಆರನೇ ತರಗತಿಯಿಂದಲೇ ಕೋಡಿಂಗ್ ಕಲಿಸಲಾಗುತ್ತಿದೆ ಎಂದು ವಿವರಿಸಿದರು.

ಕೇಂದ್ರೀಯ ವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲ ಅಮರನಾಥ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಅನ್ವೇಷಣೆ ಮತ್ತು ಆವಿಷ್ಕಾರದ ಮಧ್ಯೆ ಸಾಕಷ್ಟು ವ್ಯತ್ಯಾಸವಿದೆ. ಈ ಗುಣಗಳು ಬರಬೇಕಾದರೆ ಕಲಿಕಾ ಆಸಕ್ತಿ ಮತ್ತು ಸಂವಹನ ಕಲೆ ರೂಢಿಸಿಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಬೇಕೆಂದು ಕಿವಿಮಾತು ಹೇಳಿದರು.

ಶೈಕ್ಷಣಿಕ ವಿಭಾಗದ ನಿರ್ದೇಶಕ ಆರ್.ಎಂ.ಶಿಂಧೆ ಮಾತನಾಡಿದರು. ವಿವೇಕಾನಂದ ವಿದ್ಯಾ ನಿಕೇತನ ಎಜುಕೇಷನ್ ಟ್ರಸ್ಟ್ ಅಧ್ಯಕ್ಷೆ ಸುವರ್ಣಾ ಎಸ್. ಭಗವತಿ,
ಶಾಲೆಯ ಮುಖ್ಯಗುರು ಅನಿತಾರೆಡ್ಡಿ, ಶಾಲೆಯ ಕಂಪ್ಯೂಟರ್ ಶಿಕ್ಷಕರಾದ ನಾಗೇಶ್, ವೇದಾವತಿ ವೇದಿಕೆಯಲ್ಲಿದ್ದರು.

ಶಾಲೆಯ ಕೋಆರ್ಡಿನೇಟರ್ ಸುಮಾ ಎಸ್.ಭಗವತಿ ನಿರ್ವಹಿಸಿದರು. ವಿದ್ಯಾರ್ಥಿನಿ ಕು.ಸುದೇಷ್ಣಾ ವಂದಿಸಿದರು.

ಪ್ರಾಜೆಕ್ಟ್ ಪ್ರದರ್ಶನ

ವಿಶ್ವ ಕಂಪ್ಯೂಟರ್ ದಿನಾಚರಣೆ ಪ್ರಯುಕ್ತ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯ ವಿದ್ಯಾರ್ಥಿಗಳು ಕೋಡಿಂಗ್ ಮತ್ತು ಕೃತಕ ಬುದ್ಧಿಮತ್ತೆ ಕುರಿತಂತೆ ಸಿದ್ದಪಡಿಸಿದ ಪ್ರಾಜೆಕ್ಟ್ ಗಳ ಪ್ರದರ್ಶನ ನಡೆಯಿತು.

ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ಸೀನಿಯರ್ ಸಿಸ್ಟಂ ಅನಾಲಿಸ್ಟ್ ಪ್ರಶಾಂತ ದೇವಣಿ ಇದೇವೇಳೆ ಪ್ರಾಜೆಕ್ಟ್ ಸಿದ್ದಪಡಿಸಿದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.