ತಜ್ಞರ ವರದಿ ಆಧರಿಸಿ ಲಾಕ್‌ಡೌನ್

ಬೆಂಗಳೂರು,ಮೇ ೩೧-ರಾಜ್ಯದಲ್ಲಿ ಲಾಕ್‌ಡೌನ್, ವಿಸ್ತರಣೆ ಅನ್‌ಲಾಕ್ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ಲಾಕ್‌ಡೌನ್ ವಿಸ್ತರಿಸುವ ಸುಳಿವನ್ನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ನೀಡಿದ್ದಾರೆ.
ರಾಜ್ಯದಲ್ಲಿ ಲಾಕ್‌ಡೌನ್‌ನ್ನು ವಿಸ್ತರಿಸಬೇಕೇ ಬೇಡವೇ ಎಂಬ ಬಗ್ಗೆ ತಜ್ಞರ ಸಮಿತಿ ವರದಿಯನ್ನು ಮುಖ್ಯಮಂತ್ರಿಗಳಿಗೆ ಇಂದು ನೀಡಲಾಗುವುದು. ಆ ವರದಿಯಾಧರಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವರ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವರು ಎಂದು ಅವರು ಹೇಳಿದರು.
ಕೊರೊನಾ ತಾಂತ್ರಿಕ ಸಲಹಾ ಸಮಿತಿ ನಿನ್ನೆ ತಡರಾತ್ರಿವರೆಗೂ ಸಭೆ ನಡೆಸಿ ಲಾಕ್‌ಡೌನ್ ವಿಸ್ತರಣೆ ಬಗ್ಗೆ ವರದಿ ಸಿದ್ಧಪಡಿಸಿದೆ. ಇದನ್ನು ಮುಖ್ಯಮಂತ್ರಿಗಳಿಗೆ ನೀಡಿ ಚರ್ಚಿಸುತ್ತೇನೆ ಎಂದು ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಕೆಲ ಸಚಿವರುಗಳು ಲಾಕ್‌ಡೌನ್ ಮುಂದುವರಿಕೆ ಬೇಡ, ಜೂ. ೭ರ ನಂತರ ಅನ್‌ಲಾಕ್ ಮಾಡೋಣ ಎಂಬ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜನರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಸಚಿವರುಗಳು ಈ gರೀತಿ ಮಾತನಾಡಿರಬಹುದು. ಆದರೆ ಏಕಾಏಕಿ ಯಾವ ತೀರ್ಮಾನವನ್ನು ಮಾಡಲು ಆಗಲ್ಲ.
ತಜ್ಞರ ವರದಿ ಆಧರಿಸಿ ಲಾಕ್‌ಡೌನ್ ಅನ್‌ಲಾಕ್ ತೀರ್ಮಾನ ಆಗುತ್ತದೆ ಎಂದರು.ಆದರೆ, ವೈಜ್ಞಾನಿಕ ನೆಲೆಗಟ್ಟಿನ ಮೇಲೆ ವೈದ್ಯಕೀಯ ಹಿನ್ನೆಲೆಯಲ್ಲಿ ಗಮನದಲ್ಲಿಟ್ಟುಕೊಂಡು ತೀರ್ಮಾನಗಳನ್ನು ಮಾಡಬೇಕಾಗುತ್ತದೆ. ಮುಖ್ಯಮಂತ್ರಿಗಳಿಗೆ ವಾಸ್ತವದ ವರದಿಯನ್ನು ನೀಡುತ್ತೇವೆ. ಮುಖ್ಯಮಂತ್ರಿಗಳು ಎಲ್ಲರ ಜತೆ ಚರ್ಚಿಸಿ ಒಂದು ತೀರ್ಮಾನ ಮಾಡುತ್ತಾರೆ ಎಂದು ಸುಧಾಕರ್ ಹೇಳುವ ಮೂಲಕ ಲಾಕ್‌ಡೌನ್ ವಿಸ್ತರಣೆಯ ಸುಳಿವು ನೀಡಿದ್ದಾರೆ.
ಅಸಂಬದ್ಧ ಅಪ್ರಸ್ತುತ
ಕೊರೊನಾದ ಈ ಸಂಕಷ್ಟ ಸಂದರ್ಭದಲ್ಲಿ ರಾಜಕೀಯ ಮಾತನಾಡೋದೆ ಅಸಂಬದ್ಧ ಅಪ್ರಸ್ತುತ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಕೆಲ ಶಾಸಕರು, ಸಚಿವರು ಪರ-ವಿರೋಧ ಹೇಳಿಕೆಗಳನ್ನು ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಕುರ್ಚಿಯೇ ಖಾಲಿ ಇಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಇರುವಾಗ ಈ ರೀತಿ ಮಾತನಾಡುವುದು ಅಸಂಬದ್ಧ, ಅಪ್ರಸ್ತುತ ಎಂದರು.