ತಜ್ಞರ ಅಭಿಪ್ರಾಯ ಆಧಾರಿಸಿ ರಾತ್ರಿ ಕರ್ಫ್ಯೂ ಜಾರಿ: ಸಿಎಂ

ಬೀದರ್, ಡಿ. ೬- ಕೊರೊನಾ ರೂಪಾಂತರ ತಳಿ ಒಮಿಕ್ರಾನ್ ವೈರಸ್‌ನ್ನು ತಡೆಗಟ್ಟಲು ಸರ್ಕಾರ ಸರ್ವ ರೀತಿಯಲ್ಲೂ ಸನ್ನದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಹೇಳಿದರು.
ಕೊರೊನಾ ಒಮಿಕ್ರಾನ್ ರೂಪಾಂತರ ತಳಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಾಣಿಸಿಕೊಂಡಿದೆ. ಈ ವೈರಸ್‌ನ್ನು ತಡೆಗಟ್ಟಲು ಸರ್ವ ರೀತಿಯಲ್ಲೂ ಸನ್ನದ್ಧರಾಗಿದ್ದೇವೆ. ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ತಜ್ಞರ ಜತೆ ಚರ್ಚಿಸಿ ಅಗತ್ಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.
ಬೀದರ್‌ನ ಬಾಲ್ಕಿಯ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ರಾಜ್ಯದ ಕೆಲವೆಡೆ ಕೊರೊನಾ ಸೋಂಕು ಏರಿಕೆಯಾಗುತ್ತಿದೆ. ಅದರಲ್ಲೂ ವಿದ್ಯಾರ್ಥಿನಿಲಯಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ನಿನ್ನೆ ಚಿಕ್ಕಮಗಳೂರಿನ ವಿದ್ಯಾರ್ಥಿನಿಲಯದಲ್ಲಿ ಬಹಳಷ್ಟು ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದನ್ನು ತಡೆಗಟ್ಟಲು ಮಾರ್ಗಸೂಚಿ ಬಿಡುಗಡೆ ಮಾಡಿದ್ದೇವೆ. ಕ್ಲಸ್ಟರ್‌ಗಳನ್ನು ರೂಪಿಸಿ, ಕ್ಲಸ್ಟರ್‌ಗಳಿಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದೇವೆ ಎಂದರು.
ಕೊರೊನಾ ಸೋಂಕು ಕಾಣಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಕೊಡಿಸಲಾಗಿದೆ. ಹಾಸ್ಟೆಲ್‌ನ್ನು ಸೀಲ್ಡ್‌ಡೌನ್ ಮಾಡಿದ್ದೇವೆ. ವಿದ್ಯಾರ್ಥಿನಿಲಯಗಳಿಗೂ ಮಾರ್ಗಸೂಚಿಗಳನ್ನು ನೀಡಿದ್ದೇವೆ ಎಂದು ಅವರು ಹೇಳಿದರು.
ಕೊರೊನಾ ಸೋಂಕನ್ನು ತಡೆಯಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಅದರಲ್ಲೂ ಒಮಿಕ್ರಾನ್ ವೈರಸ್‌ನಿಂದಾಗುವ ಆಗುವ ಪರಿಣಾಮಗಳನ್ನು ತಡೆಯಲು ಸರ್ವ ಸನ್ನದ್ಧವಾಗಿದ್ದೇವೆ ಎಂದು ಅವರು ಹೇಳಿದರು.
ವಿಧಾನಪರಿಷತ್‌ನ ಚುನಾವಣೆಯಲ್ಲಿ ಬಿಜೆಪಿ ತಾನು ಸ್ಪರ್ಧಿಸಿರುವ ಎಲ್ಲ ಕ್ಷೇತ್ರಗಳಲ್ಲೂ ಗೆಲುವು ಪಡೆಯಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಹುಬ್ಬಳ್ಳಿ ವರದಿ
ರಾಜ್ಯದಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಚಿತ್ರಮಂದಿರ ಮತ್ತು ಮಾಲ್‌ಗಳಲ್ಲಿ ಶೇ. ೫೦ ರಷ್ಟು ಮಾತ್ರ ಪ್ರವೇಶ, ನೈಟ್ ಕರ್ಫ್ಯೂ ಜಾರಿ ಪ್ರಸ್ತಾಪ ಸೇರಿದಂತೆ ಎಲ್ಲ ಪ್ರಸ್ತಾಪಗಳ ಬಗ್ಗೆ ತಜ್ಞರ ಸಲಹೆ ಪಡೆದು ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಹೇಳಿದರು.
ರಾಜ್ಯದಲ್ಲಿ ಒಮಿಕ್ರಾನ್ ಇಬ್ಬರಲ್ಲಿ ಕಂಡು ಬಂದಿದೆ. ಇವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರು ಪತ್ತೆಯಾಗಿದ್ದು, ಇವರಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿಲ್ಲ ಎಂದರು.
ಕೋವಿಡ್‌ನ್ನು ತಡೆಗಟ್ಟಲು ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ತಜ್ಞರ ಸಲಹೆ ಪಡೆದೆ ತೀರ್ಮಾನಗಳನ್ನು ಕೈಗೊಳ್ಳುವುದಾಗಿ ಅವರು ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರ ಜತೆ ಚರ್ಚಿಸಿ ಅವರ ಆದೇಶದಂತೆ ತೀರ್ಮಾನಗಳಾಗುತ್ತವೆ. ಸದ್ಯಕ್ಕೆ ನಮ್ಮ ಮುಂದಿರುವುದು ವಿಧಾನಪರಿಷತ್ ಚುನಾವಣೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
ವಿಧಾನಪರಿಷತ್‌ನ ಚುನಾವಣೆಯಲ್ಲಿ ಜೆಡಿಎಸ್ ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್‌ನ ನಿಲುವು ಏನೆಂಬುದನ್ನು ಆ ಪಕ್ಷದ ನಾಯಕರು ಹೇಳಬೇಕಷ್ಟೆ ಎಂದರು.
ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಎಲ್ಲದಕ್ಕೂ ನಾನು ಉತ್ತರಿಸುವ ಅಗತ್ಯವಿಲ್ಲ ಎಂದರು.