ತಗ್ಗಿದ ಮಳೆ ತಪ್ಪದ ಬವಣೆ

Even today water login at marthahalli ring road

ಬೆಂಗಳೂರು, ಸೆ. ೭- ಕಳೆದ ಎರಡು ದಿನಗಳಿಂದ ಬೆಂಗಳೂರು ಮಹಾನಗರದಲ್ಲಿ ಸುರಿದ ಧಾರಾಕಾರ ಮಳೆರಾಯ ಕೊಂಚ ಬಿಡುವು ನೀಡಿದ್ದಾನೆ. ಆದರೆ ರೈನ್‌ಬೋ ಬಡಾವಣೆ, ಮಾರತ್ ಹಳ್ಳಿ, ಹೆಚ್‌ಎಎಲ್ ಲೇಔಟ್, ಸರ್ಜಾಪುರರಸ್ತೆಯ ದಿ ಕಂಟ್ರಿ ಸೈಡ್ ಬಡಾವಣೆಗೆ ರಾಜಕಾಲುವೆಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಾತ್ರಿ ಸುರಿದ ಭಾರಿ ಮಳೆಗೆ ಬೆಂಗಳೂರು ಹೊರವಲಯ ಹೆಬ್ಬಗೋಡಿ ತತ್ತರಿಸಿದೆ. ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಸಾರ್ವಜನಿಕರು ಪರದಾಡುವಂತಾಗಿದೆ. ಡ್ಯಾಡಿಸ್ ಬಡಾವಣೆಗೆ ಕಮ್ಮಸಂದ್ರ ಮತ್ತು ಬೊಮ್ಮಸಂದ್ರ ಕೆರೆ ನೀರು ನುಗ್ಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಷ್ಟಾದರೂ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ಶಾಸಕರು ಕೂಡ ತಿರುಗಿ ನೋಡಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಜನರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ರಘುನಂದನ್, ತಹಶೀಲ್ದಾರ್ ದಿನೇಶ್, ನಗರ ಸಭೆ ಆಯುಕ್ತರಾದ ಶ್ವೇತ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಬ್ಬಗೋಡಿಯ ವ್ಯಾಪ್ತಿಯಲ್ಲಿರುವ ಕೆರೆಗೆ ಒಡೆದು ಹೋಗಿದ್ದರಿಂದ ಡ್ಯಾಡಿಸ್ ಬಡಾವಣೆ ಜಲಾವೃತಗೊಂಡಿದೆ. ಇತ್ತೀಚೆಗೆ ಭಾರಿ ಮಳೆಯಾಗುತ್ತಿರುವುದರಿಂದ ನೀರು ಹರಿವು ಹೆಚ್ಚಾಗಿದ್ದು, ರಾಜಕಾಲುವೆ ತುಂಬಿ ಹರಿಯುತ್ತಿವೆ.
ಸರ್ಜಾಪುರ ರಸ್ತೆಯ ದಿ. ಕಂಟ್ರಿ ಸೈಡ್ ಬಡಾವಣೆಯ ೩೫ ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿ ಮೊದಲ ಮಹಡಿಯಷ್ಟು ನೀರು ನಿಂತು ನಿವಾಸಿಗಳು ಪರದಾಡುವಂತಾಗಿದೆ. ಮನೆಯ ಮುಂಭಾಗ ನಿಲ್ಲಿಸಿರುವ ವಾಹನಗಳು ನೀರಿನಲ್ಲಿ ಮುಳುಗಿ ಹೋಗಿವೆ.
ಹೆಚ್.ಎ.ಎಲ್. ಬಳಿಯ ಕಾಳಪ್ಪ ಲೇಔಟ್ ನಲ್ಲಿರುವ ೭೦ ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಈ ಬಡಾವಣೆಯಲ್ಲಿರುವ ಎಲ್ಲ ರಸ್ತೆಗಳು ಜಲಾವೃತಗೊಂಡಿವೆ. ಜನರು ಜಲದಿಗ್ಬಂಧನದಲ್ಲಿದ್ದಾರೆ.
ಮಳೆ ಬಂದಾಗಲೆಲ್ಲಾ ರೈನ್‌ಬೋ ಲೇ ಔಟ್‌ನಲ್ಲಿ ಪರಿಸ್ಥಿತಿ ಆಯೋಮಯವಾಗಿದೆ. ಎರಡು ದಿನಗಳಿಂದ ಸುರಿಯುತ್ತಿರುವ ಮನೆಗಳಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದು ಮನೆಯಿಂದ ಹೊರ ಬರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.