ತಗ್ಗಿದ ಮಳೆಅಬ್ಬರ : ಕೃಷಿ ಕಾರ್ಯಚುರುಕು

ಬೆಂಗಳೂರು, ಸೆ ೨೦- ರಾಜ್ಯದಲ್ಲಿ ವರಣನ ಅಬ್ಬರ ತಗ್ಗಿರುವ ಪರಿಣಾಮ ಕೃಷಿ ಚಟುವಟಿಕೆಯಲ್ಲಿ ರೈತರು ತೊಡಗಿದ್ದಾರೆ.
ಅತಿವೃಷ್ಠಿಯಿಂದ ಬೆಳೆ ಹಾನಿಯಾಗಿ ತರಕಾರಿ ಬೆಲೆ ಗಗಕ್ಕೇರಿದೆ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿ ಎಲ್ಲೆಡೆ ರೈತರ ಬೆಳೆ ಹಾನಿಯಾಗಿ ಸಂಕಷ್ಟಕ್ಕೆ ಸಿಲುಕಿದ್ದರು, ಇದೀಗ ಮಳೆ ಕೊಂಚ ಬಿಡುವ ಕೊಟ್ಟಿದ್ದು, ರೈತರ ಮತ್ತೆ ಕೃಷಿ ಚಟುವಟಿಕೆಯಲ್ಲಿ ತೊಡಗುವಂತಾಗಿದೆ.

ಜಲಾವೃತಗೊಂಡಿದ್ದ ಜಮೀನುಗಳು ಮೊದಲಿನ ಸ್ಥಿತಿಗೆ ಮರುಳುತ್ತಿವೆ. ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿಯ ಪ್ರವಾಹ ಇಳಿಮುಖವಾಗಿದೆ ಇನ್ನು ಕೆಲವೆಡೆ ಜನರಲ್ಲಿ ಮಳೆ ಆತಂಕ ಕಾಡುತ್ತಿದೆ.
ಇನ್ನು ಉತ್ತರ ಕರ್ನಾಟಕದಲ್ಲಿ ಮಳೆ ಇಳಿಮುಖವಾದ್ರೂ ಕೃಷ್ಣೆ ಮತ್ತು ಭೀಮ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದಕ್ಕೆ ಕಾರಣ ಮಹಾರಾಷ್ಟ್ರ ಭಾಗದಲ್ಲಿ ಆಗುತ್ತಿರುವ ಮಳೆ. ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಸಂಜೆ ಸಹ ಕೆಲವು ಭಾಗಗಳಲ್ಲಿ ಮಳೆಯಾಗಿರುವ ವರದಿಗಳು ಬಂದಿವೆ.

ಉಜನಿ ಜಲಾಶಯದಿಂದ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಭೀಮಾ ನದಿ ತೀರದ ಗ್ರಾಮಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ನದಿ ಪಾತ್ರಕ್ಕೆ ಜನರಿಗೆ ತೆರಳದಂತೆ ಸೂಚನೆ ನೀಡಲಾಗಿದೆ. ನದಿಯ ಕಡೆಗೆ ಜಾನುವಾರುಗಳನ್ನ ಬಿಡದಂತೆ ರೈತರಿಗೆ ಸೂಚನೆ ನೀಡಲಾಗಿದೆ.

ಸದ್ಯ, ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿರುವುದು ಉತ್ತಮ ವಿಷಯವಾಗಿದ್ದು ರೈತಾಪಿ ಜನರಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ಮುಂಬರುವ ದಿನಗಳಲ್ಲಿ ಉತ್ತಮ ಪ್ರೋತ್ಸಾಹ ದೊರೆಯಲಿದೆ