ತಗ್ಗದ ಮಳೆ, ತಪ್ಪದ ಬವಣೆ

ಗೋಡೆ ಕುಸಿದು ಮಗು ಸಾವು
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು, ಜು. ೨೫-ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ವರುಣ ಆರ್ಭಟ ಮುಂದುವರಿದಿದ್ದು, ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರು ತ್ರೀವ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದ ಹಲವೆಡೆ ವರ್ಷಧಾರೆ ಮುಂದುವರೆದ ಹಿನ್ನೆಲೆಯಲ್ಲಿ ೭ ದಿನ ಕಟ್ಟೆಚ್ಚರ ವಹಿಸಲಾಗಿದೆ. ದಾವಣಗೆರೆಯಲ್ಲಿ ಗೋಡೆ ಕುಸಿದು ಒಂದು ವರ್ಷದ ಮಗು ಸಾವನ್ನಪ್ಪಿದೆ.
ಇದೇ ವೇಳೆ ಬೆಂಗಳೂರು ಮಹಾನಗರದಲ್ಲಿ ಕಳೆದ ೨ ದಿನಗಳಿಂದ ಮಳೆ ಸುರಿಯುತ್ತಿದ್ದು, ಇಂದು ಕೂಡ ಮೋಡ ಕವಿದ ವಾತಾವರಣವಿದ್ದು ಮುಂದಿನ ೪೮ ಗಂಟೆಗಳಲ್ಲಿ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಉತ್ತರ ಒಳನಾಡಿನ ಬೆಳಗಾವಿ, ಹಾವೇರಿ, ಕಲ್ಬುರ್ಗಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಎಚ್ಚರಿಕೆ ವಹಿಸುವಂತೆ ನಾಗರಿಕರಿಗೆ ಸೂಚನೆ ನೀಡಿದೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕುಂಬಳೂರು ಗ್ರಾಮದಲ್ಲಿ ಧಾರಾಕಾರ ಮಳೆಯಿಂದಾಗಿ ಗೋಡೆ ಕುಸಿದು ಬಿದ್ದು ಈ ಅವಘಡ ಸಂಭವಿಸಿದೆ. ಮೃತ ಬಾಲಕಿಯನ್ನು ಕೆಂಚಪ್ಪ ಹಾಗೂ ಲಕ್ಷ್ಮಿದೇವಿಯವರ ಪುತ್ರಿ ಎಂದು ಗುರುತಿಸಲಾಗಿದೆ. ನಿರಂತರ ಮಳೆಯಿಂದಾಗಿ ಗೋಡೆ ಶಿಥಿಲಗೊಂಡಿತ್ತು. ತಂದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಉತ್ತರ ಕನ್ನಡ ಜಿಲ್ಲೆಯಲ್ಲೂ ವರುಣ ಆರ್ಭಟ ಮುಂದುವರಿದಿದ್ದು, ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದೆ. ಜಿಲ್ಲೆ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ. ಮಳೆ ಜೊತೆ ೫೦ ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಸೂಚನೆ ನೀಡಲಾಗಿದೆ.
ಕಾಳಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಕದ್ರಾ ಜಲಾಶಯದ ಕ್ರೇಸ್ ಗೇಟ್‌ಗಳಿಂದ ೬೧ ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಹಳಿಯಾಳ ತಾಲ್ಲೂಕಿನಲ್ಲಿ ಮನೆಯೊಂದರ ಮೇಲೆ ಮರ ಉರುಳಿ ಹಾನಿಯಾಗಿದೆ. ತಾಲ್ಲೂಕಿನಾದ್ಯಂತ ೭ ಮನೆಗೋಡೆಗಳು ಕುಸಿದು ಬಿದ್ದು ಹಾನಿಯಾಗಿದೆ. ಬೆಳಗಾವಿಯಲ್ಲೂ ವರ್ಷಧಾರೆಯಿಂದಾಗಿ ಘಟ್ಟಪ್ರಭಾನದಿ ತುಂಬಿ ಹರಿಯುತ್ತಿದ್ದು, ಗೋಕಾಕ್- ಶಿಂಗಳಪುರ ಸಂಪರ್ಕಿಸುವ ಸೇತುವೆ ಜಲಾವೃತಗೊಂಡಿದೆ. ಹಾವೇರಿ ಜಿಲ್ಲೆಯಲ್ಲೂ ಮಳೆ ಅನಾಹುತ ಸಂಭವಿಸಿದ್ದು, ತಾಲ್ಲೂಕಿನ ಮಾಳಪುರ ಗ್ರಾಮದಲ್ಲಿ ಗೋಡೆ ಕುಸಿದು ಗಾಯಗೊಂಡಿದ್ದು ೩ ವರ್ಷದ ಭಾಗ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.
ಮತ್ತೊಂದೆಡೆ ದಕ್ಷಿಣ ಕನ್ನಡ ಉಡುಪಿ, ಕೊಡಗು ಜಿಲ್ಲೆಗಳಲ್ಲೂ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದಾಗಿ ಸಾಮಾನ್ಯ ಜನಜೀವನ ಏರುಪೇರಾಗಿದೆ. ಭಾರೀ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಇಂದು ನಡೆಯಬೇಕಾಗಿದ್ದ ಮಂಗಳೂರು ವಿಶ್ವವಿದ್ಯಾಲಯಗಳ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ವಿಶ್ವವಿದ್ಯಾಲಯ ಪ್ರಕಟಣೆ ತಿಳಿಸಿದೆ.
ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲೂ ವರುಣ ಅಬ್ಬರ ಮುಂದುವರಿದಿದ್ದು, ಕೊಪ್ಪ ತಾಲ್ಲೂಕಿನ ಬಸರಿಕಟ್ಟೆ, ಮೆಟ್ರಿಕ್ ಬಾಲಕರ ವಿದ್ಯಾರ್ಥಿನಿಲಯದ ಕಾಂಪೌಂಡ್ ಕುಸಿದು ಬಿದ್ದಿದೆ. ಜಿಲ್ಲೆಯ ಅನೇಕ ಭಾಗಗಳಲ್ಲಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ನೀರು ರಸ್ತೆಗಳಲ್ಲಿ ಹರಿಯುತ್ತಿರುವುದರಿಂದ ತೀವ್ರ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಕಳಶ ತಾಲ್ಲೂಕಿನ ಹೆಬ್ಬಾಳ ಸೇತುವೆ ಬಳಿ ವಿದ್ಯುತ್ ತಂತಿ ತುಂಡಾಗಿರುವುದರಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕಡೂರು ತಾಲ್ಲೂಕಿನ ಮದಗದ ಕೆರೆ ತುಂಬಿ ಹರಿಯುತ್ತಿದೆ.
ಶಿವಮೊಗ್ಗದಲ್ಲೂ ವರುಣ ಅಬ್ಬರ ಮುಂದುವರಿದಿದ್ದು, ತೀರ್ಥಹಳ್ಳಿ ಹೊಸನಗರ ಸಾಗರ ತಾಲ್ಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ಮೂರು ತಾಲ್ಲೂಕುಗಳಲ್ಲಿ ಮಳೆ ಮುಂದುವರಿದಿದ್ದು, ಮಳೆ ಪ್ರಮಾಣ ತಗ್ಗಿದರೆ ಶಾಲೆ ಆರಂಭಿಸುವ ಕುರಿತು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಶಿಕಾರಿ ಪುರದಲ್ಲಿ ಭಾರಿ ಮಳೆಯಿಂದಾಗಿ ಶಿರಾಳಕೊಪ್ಪ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಅಂಜನಾಪುರ ಜಲಾಶಯ ಭರ್ತಿಯಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಈ ಜಲಾಶಯ ೨೩ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿವೆ.
ವಿಜಯಪುರ ಜಿಲ್ಲೆಯಲ್ಲೂ ಸುರಿಯುತ್ತಿರುವ ವರ್ಷಧಾರೆಗೆ ಮನೆಯ ಮೇಲ್ಚಾವಣೆ ಕುಸಿದು ವೃದ್ಧೆ ಮೃತಪಟ್ಟಿದ್ದಾರೆ. ಕಳೆದ ೨೪ ಗಂಟೆಗಳಲ್ಲಿ ಅಧಿಕ ಮಳೆ ಸುರಿದಿದ್ದು, ಓರ್ವ ವೃದ್ಧೆ ಹಾಗೂ ನಾಲ್ಕು ಜಾನುವಾರುಗಳು ಮೃತಪಟ್ಟಿದೆ. ಮೃತ ವೃದ್ಧೆಯನ್ನು ಶಿವಮ್ಮ ಎಂದು ಗುರುತಿಸಲಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ವಿಜಯಪುರ ಜಿಲ್ಲೆಯಲ್ಲಿ ೪೨.೮ ಮಿ.ಮೀ ಮಳೆಯಾಗಿದೆ.