ತಕ್ಷಣ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ:ಡಿಸಿ ಮಾಲಪಾಟಿ

ಬಳ್ಳಾರಿ,ಏ.16:ಕೋವಿಡ್-19 ರೋಗದ ಲಕ್ಷಣಗಳು ಹಾಗೂ ಅನಾರೋಗ್ಯದ ಯಾವುದೇ ಲಕ್ಷಣಗಳು ಕಂಡು ಬಂದ ತಕ್ಷಣವೇ ಸಮೀಪದ ಸರ್ಕಾರಿ ಆಸ್ಪತ್ರೆ ಅಥವಾ ಫೀವರ್ ಕ್ಲೀನಿಕ್‍ಗೆ ಭೇಟಿ ನೀಡಿ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಕಳೆದ ಒಂದು ವಾರದಿಂದ ಹೆಚ್ಚಾಗುತ್ತಿದ್ದು, ಕಳೆದ ಒಂದು ವಾರದ ಅವಧಿಯಲ್ಲಿ 11 ಜನರು ಕೋವಿಡ್‍ನಿಂದ ಮೃತಪಟ್ಟಿದ್ದಾರೆ. ಕೋವಿಡ್ ಸೋಂಕಿನಿಂದ ಮರಣ ಹೊಂದುತ್ತಿರುವ ಪ್ರಕರಣಗಳನ್ನು ಜಿಲ್ಲೆಯ ತಾಂತ್ರಿಕ ವೈದ್ಯಕೀಯ ತಜ್ಞರ ಸಮಿತಿಯು ಪರಿಶೀಲಿಸಿದ್ದು ಕೋವಿಡ್ ಪ್ರಕರಣಗಳು ಹೆಚ್ಚಳವಾಗಲು ಪ್ರಮುಖ ಅಂಶಗಳನ್ನು ತಿಳಿಸಿದೆ.
ಪ್ರಮುಖ ಅಂಶಗಳು:
ಕೋವಿಡ್19 ರೋಗದ ಲಕ್ಷಣಗಳು ಕಂಡು ಬಂದರು ಜನರು ಅದನ್ನು ನಿರ್ಲಕ್ಷಿಸಿ ತಡವಾಗಿ ಸರ್ಕಾರಿ ಆಸ್ಪತ್ರೆಗೆ ಹೋಗುವುದು. ಸೋಂಕಿನ ಲಕ್ಷಣಗಳು ಕಂಡು ಬಂದರೂ ಸರ್ಕಾರಿ ಆಸ್ಪತ್ರೆಗಳಿಗೆ ತೆರಳದೆ ಅಧಿಕೃತ ವೈದ್ಯರಲ್ಲದವರಿಂದ ಚಿಕಿತ್ಸೆ ಪಡೆಯುತ್ತಿರುವುದು. ಜ್ವರ ಕೆಮ್ಮು, ನಗಡಿ ಅಥವಾ ಯಾವುದೇ ಅನಾರೋಗ್ಯದ ಲಕ್ಷಣಗಳು ಕಂಡು ಬಂದ ತಕ್ಷಣ ಔಷದ ಅಂಗಡಿಗಳಿಂದ ಸ್ವತಃ ಔಷಧಿ ಪಡೆದು ಸ್ವಯಂ ವೈದ್ಯೆ ಮಾಡಿಕೊಳ್ಳುವುದು. ಜಿಲ್ಲಾಡಳಿತದಿಂದ ಕೋವಿಡ್ 19 ಲಕ್ಷಣದ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದರು ಜನರು ಅದನ್ನು ನಿರ್ಲಕ್ಷಿಸಿ, ರೋಗವು ತೀವ್ರಗೊಂಡ ನಂತರ ಕೊನೆ ಗಳಿಗೆಯಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ತೆರಳುವುದರಿಂದ ಜಿಲ್ಲೆಯಲ್ಲಿ ಮರಣ ಪ್ರಮಾಣ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ.
ಮರಣ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೋವಿಡ್ ಸೋಂಕಿನ ಲಕ್ಷಣಗಳು ಕಂಡು ಬಂದ ಕೂಡಲೇ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದರ ಜೊತೆಗೆ ಪಾಸಿಟಿವ್ ಬಂದರೆ ವೈದ್ಯರ ಮಾರ್ಗದರ್ಶನದಂತೆ ಹೋಂ ಕ್ವಾರೆಂಟೈನ್ ನಲ್ಲಿರಬೇಕು. ವೈದ್ಯರು ನೀಡುವ ಎಲ್ಲಾ ಔಷಧಿಗಳನ್ನು ಹಾಗೂ ನಿರ್ದೇಶನಗಳನ್ನು ಗುಣಮುಖರಾಗುವವರೆಗೂ ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು. ಹೋಂ ಕ್ವಾರೆಂಟೈನ್ ನಲ್ಲಿ ಇದ್ದವರಿಗೆ ಉಸಿರಾಡಲು ಅಥವಾ ಬೇರೆ ಯಾವುದೇ ರೀತಿಯ ತೀವ್ರ ತೊಂದರೆಗಳು ಕಂಡು ಬಂದಲ್ಲಿ ಕೂಡಲೇ ಆಂಬ್ಯುಲೆನ್ಸ್ ಗೆ ಕರೆ ಮಾಡಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಬೇಕು. ಕೋವಿಡ್ ಲಕ್ಷಣಗಳು ಕಂಡು ಬಂದ ಪ್ರಾಥಮಿಕ ಹಂತದಲ್ಲಿಯೇ ಸರ್ಕಾರಿ ಆಸ್ಪತ್ರೆಯಿಂದ ಸೂಕ್ತ ರೀತಿಯ ಮಾರ್ಗದರ್ಶನದ ಜೊತೆಗೆ ಚಿಕಿತ್ಸೆಯನ್ನು ಪಡೆದರೆ ಕೋವಿಡ್ ಸೋಂಕಿನಿಂದ ಹೆಚ್ಚಾಗುತ್ತಿರುವ ಸಾವಿನ ಪ್ರಕರಣಗಳನ್ನು ಕಡಿಮೆ ಮಾಡಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.