ತಕ್ಷಣವೇ ಸಮೀಕ್ಷೆ : ಒತ್ತುವರಿ ತೆರವಿಗೆ ಆಗ್ರಹ – ಆಂದೋಲನಾ ಎಚ್ಚರಿಕೆ

ಮಾವಿನ ಕೆರೆ ಒತ್ತುವರಿ : ಜಿಲ್ಲಾಡಳಿತ, ಶಾಸಕ, ಆರ್‌ಡಿಎ, ಸಿಎಂಸಿ ಬೆಂಬಲ
ರಾಯಚೂರು.ಜೂ.೧೦- ಐತಿಹಾಸಿಕ ಮಾವಿನ ಕೆರೆಯಲ್ಲಿ ೨೦೧೦-೧೧ ರ ವರೆಗೆ ಮತ್ತು ನಂತರದ ೧೦ ವರ್ಷಗಳಲ್ಲಿ ಒಟ್ಟು ೩೮ ಕ್ಕೂ ಅಧಿಕ ಎಕರೆ ಜಮೀನು ಒತ್ತುವರಿಯಾಗಿದ್ದು, ಭೂ ಗಳ್ಳರು ಈಗಲೂ ಸಹ ಕೆರೆಯ ಜಮೀನು ಒತ್ತುವರಿ ಮುಂದುವರೆಸಿದ ಕಾರಣ ತಕ್ಷಣವೇ ಜಿಲ್ಲಾಡಳಿತ, ಶಾಸಕರು, ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನಗರಸಭೆ ಕೆರೆಯ ಸಮಗ್ರ ಸಮೀಕ್ಷೆ ನಡೆಸಿ, ಹದ್ದುಬಸ್ತಿ ನಿಗದಿ ಪಡಿಸಿ, ಒತ್ತುವರಿ ತೆರವುಗೊಳಿಸಿ, ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಬೇಕೆಂದು ಜಾದಳ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ೧೩೯ ಎಕರೆಯಷ್ಟಿದ್ದ ಮಾವಿನ ಕೆರೆ ಈಗ ೩೮ ಎಕರೆ ಜಮೀನು ಒತ್ತುವರಿಯಾಗಿದೆ. ೨೦೧೦-೧೧ ರ ಅವಧಿಯಲ್ಲಿ ಅಂದಿನ ಜಿಲ್ಲಾಧಿಕಾರಿ ಸಾವಿತ್ರಿ ಅವರು ಕೆರೆ ಒತ್ತುವರಿ ಸಮೀಕ್ಷೆ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ೧೪ ಎಕರೆ ಜಮೀನು ಒತ್ತುವರಿ ದಾಖಲೆ ಸಮಿತ ಬಹಿರಂಗಗೊಂಡಿತು. ಅಂದಿನ ನಗರಸಭೆ ಸದಸ್ಯರಾಗಿದ್ದ ಈಶಪ್ಪ ಅವರು ಸುಮಾರು ೭ ಎಕರೆ ೧೦ ಗುಂಟೆ ಎಕರೆ ಜಮೀನು ಒತ್ತುವರಿ ಮಾಡಿದ್ದು ಬೆಳಕಿಗೆ ಬಂದಿತ್ತು. ಕೆರೆಯ ಯಾವ ಭಾಗದಲ್ಲಿ ಎಷ್ಟು ಒತ್ತುವರಿಯಾಗಿದೆಂದು ಸಮೀಕ್ಷೆಯಲ್ಲಿ ದಾಖಲಿಸಲಾಗಿತ್ತು. ಇಂದಿರಾ ನಗರ ಒತ್ತುವರಿ ಮತ್ತು ಒತ್ತುವರಿಯ ಸ್ಥಳದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಹೆಸರುಗಳೊಂದಿಗೆ ವರದಿ ಸಿದ್ಧಪಡಿಸಲಾಗಿದೆ.
ನಗರಸಭೆ ಸದಸ್ಯರಾಗಿದ್ದ ಈಶಪ್ಪ ಕೆರೆಯ ಸ್ಥಳದಲ್ಲಿ ಅನಧಿಕೃತ ಓಎಲ್ ನಂಬರ್ ಹಾಕುವ ಮೂಲಕ ನಿವೇಶನಗಳನ್ನು ಐದರಿಂದ ಹತ್ತು ಲಕ್ಷದಂತೆ ಒಟ್ಟು ೭೦ ನಿವೇಶನಗಳನ್ನು ಮಾರಾಟ ಮಾಡಲಾಗಿದೆ. ಇವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲೂ ಅಂದಿನ ಜಿಲ್ಲಾಧಿಕಾರಿ ಸೂಚಿಸಿದ್ದರು. ಆದರೆ, ನಂತರ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ೨೦೧೦-೧೧ ರ ನಂತರ ಈಗ ನಂತರದಲ್ಲೂ ಒತ್ತುವರಿ ಮತ್ತೆ ಮುಂದುವರೆದಿದೆ. ಒಟ್ಟು ೧೮ ಎಕರೆ ಜಮೀನು ಒತ್ತುವರಿಯಾಗುವ ಸಾಧ್ಯತೆಗಳಿವೆ. ವಾರ್ಡ್ ೧೪, ೪ ಮತ್ತು ೩ ರಲ್ಲಿ ಈ ಒತ್ತುವರಿ ನಡೆದಿದ್ದು, ಸುಮಾರು ೨೦೦ ರಿಂದ ೩೦೦ ನಿವೇಶನಗಳು ಮಾರಾಟ ಮಾಡಲಾಗಿದೆ.
ಈ ಬಗ್ಗೆ ಸಮಗ್ರ ಮಾಹಿತಿಯಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ, ಜಿಲ್ಲಾಡಳಿತ, ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಶಾಸಕರು ಅತಿಕ್ರಮಣದಾರರಿಗೆ ಸಾತ್ ನೀಡುತ್ತಿದ್ದಾರೆಂದು ಆರೋಪಿಸಿದ ಅವರು, ೧ ಎಕರೆ ೫ ಗುಂಟೆ ನಂದೀಶ್ವರ ದೇವಸ್ಥಾನ, ಉರುಕುಂದಿ ನರಸಿಂಹ ದೇವಸ್ಥಾನ ೫ ಎಕರೆ ಹಾಗೂ ಸುತ್ತಮುತ್ತಲಿನ ವಸತಿ ಪ್ರದೇಶ ಒತ್ತುವರಿಯ ಪ್ರದೇಶವಾಗಿದೆ. ೭ ಎಕರೆ ೧೦ ಗುಂಟೆಯಲ್ಲಿ ಇಂದಿರಾ ನಗರ ಒತ್ತುವರಿಯಾಗಿದೆ. ಐಡಿಎಸ್‌ಎಂಟಿ ಲೇಐಟ್ ಸಹ ಒತ್ತುವರಿಯ ಭಾಗವಾಗಿದೆಂದರು.
ಬಿಜೆಎಸ್‌ನಿಂದ ಹೂಳು ತೆಗೆಯುವ ಕಾರ್ಯಕ್ರಮ ನಡೆಸಲಾಗುತ್ತದೆ. ಇದು ಉತ್ತಮ ಕಾರ್ಯವಾಗಿದೆ. ಆದರೆ, ಕೆರೆಯಲ್ಲಿ ತೆಗೆದ ಹೂಳನ್ನು ಕೆಲ ಒತ್ತುವರಿದಾರರು ಅಲ್ಲೇ ಒಡ್ಡುಗಳಲ್ಲಿ ಹಾಕಿಸುವ ಮೂಲಕ ಒತ್ತುವರಿಯನ್ನು ಅಧಿಕೃತಗೊಳಿಸುವ ತಂತ್ರ ನಡೆಸಿದ್ದಾರೆ. ಬಿಜೆಎಸ್ ಉತ್ತಮ ಕೆಲಸವನ್ನು ಒತ್ತುವರಿದಾರರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಜೆಎಸ್ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಸೂಚಿಸಲಾಗುತ್ತದೆ. ಕೆರೆಯನ್ನು ಸಂಪೂರ್ಣ ಸಮೀಕ್ಷೆ ನಂತರ ತೆರವುಗೊಳಿಸಿ, ಹೂಳು ತೆಗೆಯುವ ಪ್ರಕ್ರಿಯೆ ಕಾರ್ಯಾಚರಣೆ ನಡೆಯಬೇಕು. ಅಂದರೆ ಮಾತ್ರ ಈ ಐತಿಹಾಸಿಕ ಮಾವಿನ ಕೆರೆ ಉಳಿಯಲು ಸಾಧ್ಯ. ಮಾವಿನ ಕೆರೆ ಅಭಿವೃದ್ಧಿ ಬಗ್ಗೆ ಹೇಳುವ ನಗರ ಶಾಸಕರೇ, ಮಾವಿನ ಕೆರೆ ಒತ್ತುವರಿ ತೆರವುಗೊಳಿಸಿದರೇ ಮಾತ್ರ, ಕೆರೆಯ ಸಮಗ್ರ ಅಭಿವೃದ್ಧಿ ಸಾಧ್ಯ. ಇಲ್ಲದಿದ್ದರೇ ಇದು ಭೂಗಳ್ಳರಿಗೆ ನೆರವಾಗುವ ಅಭಿವೃದ್ಧಿಯಾಗುತ್ತದೆಂದು ಎಚ್ಚರಿಸಿದರು.
ನಾಳೆ ನಡೆಯುವ ನಗರಸಭೆ ಸದಸ್ಯರಲ್ಲಿರುವ ಬುದ್ಧಿವಂತರೇ, ಈ ಬಗ್ಗೆ ಧ್ವನಿಯೆತ್ತಿ. ನಗರದ ಮಾವಿನ ಕೆರೆಯನ್ನು ಉಳಿಸಬೇಕೆಂದು ಒತ್ತಾಯಿಸಲಾಯಿತು. ತಕ್ಷಣವೇ ಜಿಲ್ಲಾಧಿಕಾರಿಗಳು ನಾಳೆಯಿಂದಲೇ ಸರ್ವೇಗೆ ಆದೇಶಿಸಬೇಕು. ಇಲ್ಲದಿದ್ದರೇ ಮಾವಿನ ಕೆರೆ ಉಳಿಸಿ ಆಂದೋಲನಾ ನಡೆಸಬೇಕಾಗುತ್ತದೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎನ್.ಶಿವಶಂಕರ ವಕೀಲ, ರವೀಂದ್ರನಾಥ ಪಟ್ಟಿ, ಯೂಸುಫ್ ಖಾನ್, ವಿಶ್ವನಾಥ ಪಟ್ಟಿ, ರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.