ತಕ್ಷಣವೇ ತಾಲೂಕಿನ ಹೇಮಾವತಿ ಕಾಲುವೆಗಳಿಗೆ ನೀರು ಬಿಡುವಂತೆ ಶಾಸಕ ಹೆಚ್.ಟಿ.ಮಂಜು ಆಗ್ರಹ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಆ.08:- ಹೇಮಾವತಿ ಜಲಾಶಯದಿಂದ ತಕ್ಷಣವೇ ತಾಲೂಕಿನ ಹೇಮಾವತಿ ಕಾಲುವೆಗಳಿಗೆ ನೀರು ಬಿಡುವಂತೆ ಶಾಸಕ ಹೆಚ್.ಟಿ.ಮಂಜು ಆಗ್ರಹಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದಿಗೋಷ್ಠಿ ನಡೆಸಿದ ಅವರು ಆಗಸ್ಟ್ ತಿಂಗಳ ಮೊದಲವಾರ ಅಂತ್ಯಗೊಂಡಿದ್ದರೂ ಇದುವರೆಗೂ ಹೇಮಾವತಿ ಜಲಾಶಯದಿಂದ ತಾಲೂಕಿನ ಕಾಲುವೆಗಳಿಗೆ ನೀರು ಬಿಡದಿರುವ ಅಧಿಕಾರಿಗಳ ಕ್ರಮದ ಬಗ್ಗೆ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗದೆ ಹೇಮಾವತಿ ಜಲಾಶಯ ಭರ್ತಿಯಾಗಿಲ್ಲ ಎನ್ನುವ ಸತ್ಯ ನನಗೂ ಗೊತ್ತಿದೆ. ಆದರೆ ರೈತರ ಕೃಷಿ ಚಟುವಟಿಕೆಗಳಿಗೆ ನೀರು ಬಿಡಲಾರದಷ್ಟು ದುಸ್ಥಿತಿಯಲ್ಲಿ ಜಲಾಶಯವಿಲ್ಲ. ತಾಲೂಕಿನ ರೈತರು ತಮ್ಮ ಕೃಷಿ ಭೂಮಿಯನ್ನು ಹದಗೊಳಿಸಿಕೊಂಡು ಬಿತ್ತನೆ ಕಾರ್ಯಕ್ಕಾಗಿ ಕಾಯುತ್ತಿದ್ದಾರೆ. ಆದರೆ ಇದುವರೆಗೂ ಹೇಮಾವತಿ ಜಲಾಶಯ ವ್ಯಾಪ್ತಿಯ ನೀರಾವರಿ ಸಲಹಾ ಸಮಿತಿಯ ಸಭೆ ಕರೆಯದೆ ರೈತರನ್ನು ಸಂಕಷ್ಠದ ಪರಿಸ್ಥಿತಿಗೆ ತಂದು ನಿಲ್ಲಿಸಲಾಗಿದೆ. ನಮ್ಮ ಕ್ಷೇತ್ರ ವ್ಯಾಪ್ತಿಯ ಕಾಲುವೆಗಳಿಗೆ ನೀರು ಬಿಡಲು ನೀರಾವರಿ ಸಲಹಾ ಸಮಿತಿಯ ಸಭೆ ನಡೆದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ನೀರಾವರಿ ಸಲಹಾ ಸಮಿತಿಯ ಸಭೆ ಕರೆಯುವ ಮುನ್ನವೇ ತುಮಕೂರು ಜಿಲ್ಲೆಯ ಚಿಟ್ಟನಹಳ್ಳಿ ಕೆರೆ ತುಂಬಿಸಲು ನೀರು ಬಿಟ್ಟಿದ್ದಾರೂ ಏಕೆ? ಎಂದು ಪ್ರಶ್ನಿಸಿರುವ ಶಾಸಕ ಹೆಚ್.ಟಿ.ಮಂಜು ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಮಲತಾಯಿ ಧೋರಣೆ ತಾಳಬಾರದು. ಎಲ್ಲಾ ಭಾಗದ ರೈತರನ್ನು ಸಮಾನವಾಗಿ ಕಾಣಬೇಕು. ಜಲಾಶಯದಲ್ಲಿ ನೀರು ಸಂಗ್ರಹಿಸಿ ಹೊರ ರಾಜ್ಯದವರಿಗೆ ನೀರು ಬಿಟ್ಟು ನಮ್ಮ ರೈತರಿಗೆ ದ್ರೋಹ ಬಗೆಯುವ ಬದಲು ಕಾಲುವೆಗಳ ಮುಖಾಂತರ ನೀರು ಹರಿಸಿ ನೀರಿನ ಸದ್ಬಳಕೆಗೆ ಮುಂದಾಗುವಂತೆ ಒತ್ತಾಯಿಸಿದರು.
ಹೇಮಾವತಿ ಜಲಾಶಯದ ಎಡದಂಡೆ ಮುಖ್ಯ ಕಾಲುವೆಯಿಂದ ನಮ್ಮ ತಾಲೂಕಿನ 54 ಸಾವಿರ ಎಕರೆ ಪ್ರದೇಶಕ್ಕೆ ನೀರು ಹರಿದರೆ ಹೇಮಗಿರಿ ಮತ್ತು ಮಂದಗೆರೆ ಎಡ ಹಾಗು ಬಲದಂಡೆ ನಾಲೆಗಳಿಂದ ಸುಮಾರು 21 ಸಾವಿರ ಎಕರೆ ಪ್ರದೇಶ ನೀರಾವರಿಗೆ ಒಳಪಟ್ಟಿದೆ. ನದಿ ಅಣೆಕಟ್ಟೆ ನಾಲೆಗಳಾದ ಮಂದಗರೆ ಮತ್ತು ಹೇಮಗಿರಿ ನಾಲೆಗಳಿಗೂ ನೀರಾವರಿ ಸಲಹಾ ಸಮಿತಿ ಸಭೆ ನಡೆಯುವುದಕ್ಕೂ ಯಾವುದೇ ಸಂಬಂಧವಿಲ್ಲ. ಮೆಟ್ಟೂರು ಮತ್ತು ಕೆ.ಆರ್.ಎಸ್ ಅಣೆಕಟ್ಟೆಗಳ ನಿರ್ಮಾಣಕ್ಕೂ ಮುನ್ನವೇ ಇಲ್ಲಿನ ರೈತರು ನೀರಾವರಿ ಸೌಲಭ್ಯ ಪಡೆದುಕೊಂಡಿದ್ದು ಹೇಮಾವತಿ ನೀರಿನ ಮೊದಲ ಹಕ್ಕುದಾರರು ಇವರಾಗಿದ್ದಾರೆ. ಕಾವೇರಿ ಜಲ ವಿವಾದದ ಹೆಸರಿನಲ್ಲಿ ನದಿ ಅಣೆಕಟ್ಟೆ ನಾಲೆಗಳ ರೈತರ ನೀರಿನ ಹಕ್ಕು ಕಸಿಯುವ ಅಧಿಕಾರ ನೀರಾವರಿ ಇಲಾಖೆಗಿಲ್ಲ. ಹೇಮಾವತಿ ಅಣೆಕಟ್ಟೆಯಲ್ಲಿ ನೀರು ಸಂಗ್ರಹಿಸಿ ತಮಿಳುನಾಡಿಗೆ ಬಿಡುವ ಬದಲು ಮಳೆ ಬಿದ್ದ ಕೂಡಲೇ ಜಲಾಶಯದಿಂದ ನೀರು ಹರಿಸುವ ಕೆಲಸ ಮಾಡಬೇಕು. ಜಲಾಶಯದಲ್ಲಿ ನೀರಿನ ಸಂಗ್ರಹವಿದ್ದರೆ ತಾನೆ ತಮಿಳು ನಾಡಿನವರು ನೀರು ಕೇಳುವುದು?. ಹೇಮಾವತಿ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವಂತೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದರೂ ಅಧಿಕಾರಿಗಳು ಇದುವರೆಗೂ ನೀರು ಬಿಟ್ಟಿಲ್ಲ. ನೀರಿಗಾಗಿ ರೈತರು ಬೀದಿಗಿಳಿಯುವ ಮುನ್ನವೇ ಹೇಮಾವತಿ ಕಾಲುವೆಗಳಿಗೆ ನೀರು ಹರಿಸಿ ತಾಲೂಕಿನ ಕೆರೆ-ಕಟ್ಟೆಗಳನ್ನು ತುಂಬಿಸುವ ಕೆಲಸ ಮಾಡಬೇಕು. ಕ್ಷೇತ್ರದಲ್ಲಿ ಸಾಕಷ್ಟು ಮಳೆಯಾಗದೆ ಬರದ ಛಾಯೆ ಕಾಣಿಸಿಕೊಂಡಿದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಕಾಣಿಸಿಕೊಳ್ಳುವ ಮುನ್ನವೇ ಹೇಮೆಯ ನೀರಿನಿಂದ ತಾಲೂಕಿನ ಕೆರೆ-ಕಟ್ಟೆಗಳನ್ನು ತುಂಬಿಸುವ ಕೆಲಸ ಮಾಡಬೇಕೆಂದು ಶಾಸಕರು ಒತ್ತಾಯಿಸಿದ್ದಾರೆ.
ಬಿತ್ತನೆ ಬೀಜ ವಿತರಿಸಿ: ತಾಲೂಕಿನ ಕೃಷಿ ಇಲಾಖೆಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜ ಸಂಗ್ರಹವಿದ್ದರೂ ನೀರಾವರಿ ಸಲಹಾ ಸಮಿತಿಯ ಸಭೆ ನಡೆಸಿ ಕಾಲುವೆಗೆ ನೀರು ಹರಿಸುವವರೆಗೂ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಿದಂತೆ ತಡೆಹಿಡಿಯಲಾಗಿದೆ. ಇದು ಸರಿಯಾದ ಕ್ರಮವಲ್ಲ. ಅಗತ್ಯವಿರುವ ರೈತರಿಗೆ ಬಿತ್ತನೆ ಬೀಜಗಳನ್ನು ವಿತರಿಸುವ ಕೆಲಸ ಮಾಡಬೇಕು ಎಂದು ಶಾಸಕ ಹೆಚ್.ಟಿ.ಮಂಜು ಆಗ್ರಹಿಸಿದರು.