
ಅರಸೀಕೆರೆ, ಜ. ೯- ತಂಬಾಕು ಉತ್ಪನ್ನಗಳ ಸೇವನೆಯಿಂದ ಮನುಷ್ಯನ ಆರೋಗ್ಯಕ್ಕೆ ಹಾನಿಕರ ಆದಕಾರಣ ತಂಬಾಕು ಉತ್ಪಾದನೆ ಸರಬರಾಜು ಮತ್ತು ಮಾರಾಟದ ಮೇಲೆ ನಿಯಂತ್ರಣ ಹೇರಲು ಕೇಂದ್ರ ಸರ್ಕಾರ ೨೦೦೩ರಲ್ಲಿ ವಿಶೇಷ ಕಾಯ್ದೆ ಜಾರಿಗೆ ತಂದಿದೆ ಎಂದು ತಹಶೀಲ್ದಾರ್ ಸಂತೋಷ್ ಕುಮಾರ್ ಹೇಳಿದರು.
ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ, ನಗರಸಭೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ವತಿಯಿಂದ ಏರ್ಪಡಿಸಿದ್ದ ಗುಲಾಬಿ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಂಬಾಕು ಉತ್ಪನ್ನಗಳ ಆದ ಬೀಡಿ-ಸಿಗರೇಟು ಜರ್ದಾ ಗುಟ್ಕಾ ಇತ್ಯಾದಿ ಸೇವನೆಯಿಂದ ಮನುಷ್ಯನ ಆರೋಗ್ಯ ಹಾಳಾಗಿ ಪ್ರತಿ ವರ್ಷ ಜಗತ್ತಿನಲ್ಲಿ ೬೦ ಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಭಾರತದಲ್ಲಿ ೧೦ ಲಕ್ಷ ಜನರು ತಂಬಾಕು ಸೇವನೆಗೆ ಸಂಬಂಧಿಸಿದ ರೋಗಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಹೇಳಿದರು.
ಮಲೇರಿಯಾ ಕ್ಷಯಾ, ಎಚ್ಐವಿ ರೋಗಕ್ಕಿಂತಲೂ ಅಪಾಯಕಾರಿ ರೋಗಗಳು ತಂಬಾಕು ಸೇವನೆಯಿಂದ ಉಂಟಾಗುತ್ತದೆ. ಆದ್ದರಿಂದ ಭಾರತ ಸರ್ಕಾರ ಸಾರ್ವಜನಿಕರ ಆರೋಗ್ಯ ಕಾಪಾಡುವ ಉದ್ದೇಶದಿಂದ ೨೦೦೩ರಲ್ಲಿ ತಂಬಾಕು ವಸ್ತುಗಳ ಉತ್ಪಾದನೆಗಳ ಮೇಲೆ ನಿಯಂತ್ರಣ ಸಾಧಿಸಲು ಕಾಯ್ದೆಯನ್ನು ಜಾರಿಗೆ ತಂದು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಾಗಪ್ಪ ಬಾಲಕರ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್, ನಗರಸಭೆ ಪೌರಾಯುಕ್ತ ಕಾಂತರಾಜ್, ಕಾರ್ಮಿಕ ಇಲಾಖೆ ನಿರೀಕ್ಷಕ ಪ್ರಭಾಕರ್, ಶಿಕ್ಷಣ ಇಲಾಖೆ ಸಂಯೋಜಕ ಗಿರೀಶ್, ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ನೀಲಕಂಠಪ್ಪ, ಶಿಕ್ಷಕರಾದ ರಾಜಶೇಖರ್ ನಾಯಕ್, ನಟರಾಜ್, ಆಯುಷ್, ಗಂಗಮ್ಮ, ಎಂ ಲಲಿತ ಉಪಸ್ಥಿತರಿದ್ದರು.