ತಂಬಾಕು ಸೇವನೆ ಆರೋಗ್ಯಕ್ಕೆ  ಹಾನಿಕರ

ಸಂಜೆವಾಣಿ ವಾರ್ತೆ

ದಾವಣಗೆರೆ.ಸೆ.೧೧; ನಗರದ ಕಸ್ತೂರಬಾ ಪದವಿ ಪೂರ್ವ ಕಾಲೇಜಿನಲ್ಲಿ ಎನ್ ಎಸ್ ಎಸ್ ಘಟಕ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ದಾವಣಗೆರೆ ಇವರ ಸಂಯುಕ್ತ ಆಶ್ರಯದಲ್ಲಿ “ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ” ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ದಾವಣಗೆರೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ್ ನ ಜಿಲ್ಲಾ ಸಲಹೆಗಾರರಾದ  ಸತೀಶ್  ತಂಬಾಕಿನಿಂದ ತಯಾರಿಸುವ ಬೀಡಿ,ಸಿಗರೇಟು, ಗುಟ್ಕಾ ಮೊದಲಾದುವುಗಳ ಸೇವನೆಯಿಂದ ಮಾನವ ಕ್ಯಾನ್ಸರ್ ನಂತಹ ಮಾರಕ ಖಾಯಿಲೆಗೊಳಗಾಗುತಿದ್ದಾನೆ. ಅದರಲ್ಲಿಯೂ ನಮ್ಮ ದೇಶದಲ್ಲಿ ಇಂದು ಹದಿನೈದು ವರ್ಷದಿಂದ ಹದಿನೆಂಟು ವರ್ಷದೊಳಗಿನ ಶೇಕಡಾ 22 ರಷ್ಟು ಯುವ ಪೀಳಿಗೆಯೇ  ತಂಬಾಕು ಸೇವನೆಗೆ ಒಳಗಾಗುತ್ತಿರುವುದು ಆಂತಕದ ವಿಷಯವಾಗಿದೆ. ಹೆಚ್ಚಿನ ಯುವಕರು ತಂಬಾಕು ಸೇವನೆಯಿಂದ ಕ್ಯಾನ್ಸರ್ ಮಾತ್ರವಲ್ಲದೆ ಮಾನಸಿಕ ಖಿನ್ನತೆ ಮತ್ತು ಮೆದುಳು ಸಂಬಂಧಿ ಖಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಆದುದರಿಂದ  ಯುವಕರು ಮತ್ತು ಎನ್ ಎಸ್ ಎಸ್ ವಿದ್ಯಾರ್ಥಿಗಳಾದ ನೀವುಗಳೆಲ್ಲರೂ  ತಂಬಾಕು ಸೇವನೆಯಿಂದ ದೂರವಿರುವುದರ ಜೊತೆಗೆ ನಿಮ್ಮ ಕುಟುಂಬದ ಹಿರಿಯರು ಮತ್ತು  ಸಮಾಜದಲ್ಲಿ  ತಂಬಾಕು ಸೇವನೆ ಮಾಡುವ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಕರೆನೀಡಿದರು.ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲು ಆಗಮಿಸಿದ ಸಾಮಾಜಿಕ ಕಾರ್ಯಕರ್ತ  ದೇವರಾಜ್   ಕೆಲವು ಯುವಕರು  ಕುತೂಹಲಕ್ಕೆ  ಇನ್ನೂ ಕೆಲವು ಯುವಕರು ಸ್ನೇಹಿತರ ಸಹವಾಸದಿಂದ ‌ಸಿಗರೇಟು, ಗುಟ್ಕಾವನ್ನು  ಸೇವನೆ  ಮಾಡುವ ಮೂಲಕ ಕ್ರಮೇಣ ಅವರಲ್ಲಿ ಚಟವಾಗಿ ಪರಿಣಮಿಸಿ ತಂಬಾಕು ವ್ಯಸನಿಗಳಾಗುತ್ತಾರೆ ಎಂದು ಎಚ್ಚರಿಕೆ ನುಡಿಗಳನ್ನಾಡುವುದರ ಜೊತೆಗೆ ಇದರಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಹೇಗೆ ಕ್ಯಾನ್ಸರ್ ನಂತಹ ಖಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ ಎಂಬುದನ್ನು ಕಿರು ಚಿತ್ರವನ್ನು ಪ್ರದರ್ಶನ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.ಸಮಾಜಶಾಸ್ತ್ರ ಉಪನ್ಯಾಸಕರಾದ ವೀರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಎಸ್ ಜಿ ನಾಗರಾಜ್  ಪ್ರಾಸ್ತಾವಿಕ ನುಡಿಗಳನ್ನಾಡಿದರು.