ತಂಬಾಕು ಸೇವನೆಯಿಂದ ವಾರ್ಷಿಕ ೧೩ ಲಕ್ಷ ಸಾವು


 ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೧೬: ತಂಬಾಕು ಉತ್ಪನ್ನಗಳ ಸೇವನೆಯಿಂದ ದೇಶದಲ್ಲಿ ವರ್ಷಕ್ಕೆ ೧೩ ಲಕ್ಷ ಜನರು ಸಾವಿಗೀಡಾಗುತ್ತಿದ್ದು, ಜನರ ಸಾವಿನಿಂದ ಆಗುವ ನಷ್ಟ ತುಂಬಲು ತಂಬಾಕು ಕಂಪನಿಗಳು ಯುವಜನಾಂಗವನ್ನು ತಂಬಾಕು ಸೇವನೆಗೆ ಪ್ರಚೋದಿಸುತ್ತಿವೆ ಎಂಬ ಆಘಾತಕಾರಿ ಮಾಹಿತಿಯನ್ನು ರಾಜ್ಯ ತಂಬಾಕು ನಿಯಂತ್ರಣ ಕೋಶದ ವಿಭಾಗೀಯ ಸಂಯೋಜನಾಧಿಕಾರಿ ಮಹಾಂತೇಶ್ ಉಳ್ಳಾಗಡ್ಡಿ ತಿಳಿಸಿದರು.ನಗರದ ಜಿಲ್ಲಾ ವರದಿಗಾರರ ಕೂಟದಲ್ಲಿ ಆಯೋಜಿಸಲಾಗಿದ್ದ ‘ತಂಬಾಕು ಹಾಗೂ ಅದರ ದುಷ್ಪರಿಣಾಮಗಳು, ತಂಬಾಕು ಮಾರಾಟಗಾರರಿಗೆ ಪರವಾನಗಿ ಮತ್ತು ಕೋಟ್ಪಾ-೨೦೦೩ರ ಕಾಯ್ದೆ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.ಗೂಡಂಗಡಿಗಳು ಸೇರಿ ಅಲ್ಲಲ್ಲಿ ತಳ್ಳುವ ಗಾಡಿಗಳಲ್ಲಿ ಯಾವುದೇ ಪರವಾನಿಗೆ ಪಡೆಯದೇ ತಂಬಾಕು ಮಾರಾಟ ಮಾಡಲಾಗುತ್ತಿದೆ. ಇದು ಕಾನೂನು ರೀತಿ ಅಪರಾಧವಾಗಿದೆ. ಪ್ರೌಢಾವಸ್ಥೆಗೆ ಬರುತ್ತಿರುವ ಮಕ್ಕಳು ಜೀವಕ್ಕೆ ಎರವಾಗುವ ತಂಬಾಕಿನಿAದ ದೂರ ಉಳಿಯಬೇಕೆಂದು ಕಾಯ್ದೆಯಡಿ ಶಾಲೆಗಳಿಂದ ೧೦೦ ಅಡಿ ಅಂತರದಲ್ಲಿ ತಂಬಾಕು ಮಾರಾಟ ಮಾಡಬೇಕೆಂಬ ನಿಯಮವಿದೆ. ಆದರೂ ಸಹ ಎಗ್ಗಿಲ್ಲದೇ ಗೂಡಂಗಡಿಗಳು, ತಳ್ಳುವ ಗಾಡಿಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದ್ದು, ಕೊಟ್ಪಾ ಕಾಯ್ದೆಯಡಿ ಈ ರೀತಿ ಮಾರಾಟ ಮಾಡಿದರೆ ೭ ವರ್ಷದ ವರೆಗೆ ಜೈಲು ಶಿಕ್ಷೆ ಹಾಗೂ ೧ ಲಕ್ಷ ರೂ., ವರೆಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು.ಇಲಾಖೆಯಿಂದ ಈಗಾಗಲೇ ತಂಬಾಕು ಉತ್ಪನ್ನಗಳನ್ನು ಸೇವಿಸದಂತೆ ಜಾಗೃತಿ ಮೂಡಿಸಲಾಗುತ್ತಿದ್ದು, ಪ್ರತಿ ವರ್ಷಕ್ಕೊಮ್ಮೆ ಘೋಷ ವಾಕ್ಯಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಆರೋಗ್ಯ ನಮ್ಮ ಕೈಯಲ್ಲಿಯೇ ಇರುವುದರಿಂದ ತಂಬಾಕಿನಿAದ ದೂರ ಉಳಿದು ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ ಮಾತನಾಡಿ, ವಸತಿ ಮತ್ತು ಶಾಲಾ ಪ್ರದೇಶಗಳಲ್ಲಿ ತಂಬಾಕು ಉತ್ಪನ್ನ ಮಾರಾಟದ ಬಗ್ಗೆ ಈಗ ಗಮನಕ್ಕೆ ಬಂದಿದ್ದು, ಇದನ್ನು ತಡೆಯಲು ಚರ್ಚೆ ನಡೆಸಿ ಅಧಿಕಾರಿಗಳ ತಂಡ ರಚಿಸಲಾಗುವುದು ಎಂದು ಭರವಸೆ ನೀಡಿದರು.ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್, ಪಾಲಿಕೆ ಆರೋಗ್ಯಾಧಿಕಾರಿ ಸುಧೀಂದ್ರ, ಶ್ರೀನಿವಾಸ್, ಕೂಟದ ಪ್ರಧಾನ ಕಾರ್ಯದರ್ಶಿ, ಡಾ. ಸಿ. ವರದರಾಜ, ಖಜಾಂಚಿ ಮಧು ನಾಗರಾಜ್ ಕುಂದುವಾಡ ಉಪಸ್ಥಿತರಿದ್ದರು, ಸತೀಶ್ ಕಲಹಾಳ ನಿರೂಪಣೆ ಮಾಡಿದರು, ಕೆ.ಪಿ. ದೇವರಾಜ ವಂದಿಸಿದರು.