ತಂಬಾಕು ಸೇವನೆಯಿಂದ ಪ್ರತೀ ವರ್ಷ 30 ಲಕ್ಷ ಸಾವು:ಮಾಶಾಳಕರ್

ಬೀದರ್: ಜು.27:ಮನುಷ್ಯನಿಗೆ ಕೆಟ್ಟ ಚಟಗಳು ಎಂದಿಗೂ ಒಳ್ಳೆಯದಲ್ಲ. ಚಟಗಳು ಎಂದಿಗೂ ಸಾಯುವುದಿಲ್ಲ. ಬದಲಾಗಿ ಚಟಕ್ಕಂಟಿದ ವ್ಯಕ್ತಿ ಮಾತ್ರ ಸಾಯುತ್ತಾನೆ. ತಂಬಾಕು ಸೇವನೆ ಅತ್ಯಂತ ಅಪಾಯಕಾರಿ. ಬೀಡಿ, ಸಿಗರೇಟ್, ಗುಟಖಾದಂತಹ ತಂಬಾಕು ಸೇವನೆಯಿಂದ ಭಾರತದಲ್ಲಿ ಪ್ರತೀ ವರ್ಷ 30 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಕೇವಲ ವೇದಿಕೆ ಮೇಲೆ ನಿಂತು ಭಾಷಣ ಮಾಡಿದರೆ ತಂಬಾಕು ನಿಯಂತ್ರಣ ಅಸಾಧ್ಯ. ಪ್ರತಿಯೊಬ್ಬರೂ ಸ್ವಯಂಪ್ರೇರಣೆಯಿಂದ ಜಾಗೃತರಾಗಿ ತಂಬಾಕು ನಿಯಂತ್ರಣ ಮಾಡಬೇಕಾಗಿದೆ ಎಂದು ಎಸ್. ಬಿ. ಪಾಟೀಲ ದಂತವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಪ್ರಾಚಾರ್ಯ ಡಾ. ಶೈಲೇಂದ್ರ ಮಾಶಾಳಕರ್ ನುಡಿದರು.

ಕರ್ನಾಟಕ ಕಾಲೇಜು ಪ್ರಾಣಿಶಾಸ್ತ್ರ ವಿಭಾಗ, ಎನ್.ಎಸ್.ಎಸ್. ಎ ಮತ್ತು ಬಿ ಘಟಕ, ರೆಡ್ ಕ್ರಾಸ್ ಹಾಗೂ ಎಸ್.ಬಿ.ಪಾಟೀಲ ದಂತ ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಕರ್ನಾಟಕ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ ತಂಬಾಕು ನಿಲುಗಡೆ ಹಾಗೂ ದಂತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ತಂಬಾಕು ಉತ್ಪಾದನೆಯಿಂದ ಪ್ರತೀ ವರ್ಷ 35 ಸಾವಿರದ 600 ಕೋಟಿ ರೂಪಾಯಿ ಆದಾಯ ತೆರಿಗೆ ಸಂಗ್ರಹವಾಗುತ್ತದೆ. ಹೀಗಾಗಿ ಆಯಾ ಸರ್ಕಾರಗಳು ಇದನ್ನು ನಿಯಂತ್ರಿಸಲು ಪ್ರಯತ್ನ ಮಾಡುವುದಿಲ್ಲ. ಹೀಗಾಗಿ ವ್ಯಕ್ತಿಯ ಸ್ವಯಂ ಇಚ್ಛೆ ಹಾಗೂ ಧೃಢನಿರ್ಧಾರದಿಂದ ಮಾತ್ರ ತಂಬಾಕು ಸೇವನೆಯ ನಿಯಂತ್ರಣ ಮಾಡಬಹುದು ಎಂದು ಮಾಶಾಳಕರ್ ಮಾರ್ಮಿಕವಾಗಿ ನುಡಿದರು.

ಕರ್ನಾಟಕ ಕಾಲೇಜಿನಲ್ಲಿ ಕಾರ್ಯಕ್ರಮದ ಉದ್ಘಾಟನೆ ನಂತರ ಲಾಡಗೇರಿಯ ಹಿರೇಮಠ ಸಂಸ್ಥಾನದಲ್ಲಿ ದಂತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿತ್ತು. ತಪಾಸಣಾ ಕಾರ್ಯಕ್ರಮಕ್ಕೆ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಜಾಬಶೆಟ್ಟಿಯವರು ತಂಬಾಕು ಸೇವನೆಯಿಂದ ಹಲ್ಲುಗಳು ಬೇಗ ಉದುರುತ್ತವೆ. ಇಡೀ ಬಾಯಿ ನಿಯಂತ್ರಣ ತಪ್ಪಿ ರುಚಿ ಗ್ರಹಿಸುವುದನ್ನು ನಿಲ್ಲಿಸಿಬಿಡುತ್ತವೆ. ಗಟ್ಟಿಕಾಳುಗಳನ್ನು ತಿನ್ನಲು ಅಸಾಧ್ಯವಾಗುತ್ತದೆ. ಹೀಗಾಗಿ ದೈಹಿಕ ಆರೋಗ್ಯದ ಜೊತೆಗೆ ಹಲ್ಲುಗಳ ಆರೈಕೆ ಬಹಳ ಮುಖ್ಯ ಎಂದು ನುಡಿದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಕರಾಶಿ ಸಂಸ್ಥೆಯ ಟ್ರಸ್ಟಿ ಡಾ. ಚನ್ನಬಸಪ್ಪ ಹಾಲಹಳ್ಳಿ, ಸಂಸ್ಥೆಯ ಕಾರ್ಯದರ್ಶಿ ಸಿದ್ರಾಮ ಪಾರಾ, ಜಂಟಿ ಕಾರ್ಯದರ್ಶಿ ಸತೀಶ ಪಾಟೀಲ, ಆಡಳಿತ ಮಂಡಳಿ ಸದಸ್ಯ ಚಂದ್ರಕಾಂತ ಶೆಟಕಾರ, ನಿರ್ದೇಶಕ ರವಿ ಹಾಲಹಳ್ಳಿ, ಕಾಲೇಜಿನ ಪ್ರಾಚಾರ್ಯ ಡಾ. ಎಂ.ಎಸ್.ಚೆಲ್ವಾ, ಮೂವರು ಎನ್.ಎಸ್.ಎಸ್. ಅಧಿಕಾರಿಗಳಾದ ಎ.ಡಿ. ಶೆಟಕಾರ, ಸೋಮನಾಥ ಬಿರಾದಾರ, ಮಧುಸೂಧನ್ ಕುಲಕರ್ಣಿ ಹಾಗೂ ದಂತ ಮಹಾವಿದ್ಯಾಲಯದ ಡಾ. ಚಂದ್ರಶೇಖರ ಗೌಡಪಾಟೀಲ, ಡಾ. ಶರಶಚಂದ್ರ ಪಾಟೀಲ ಮತ್ತು ಸಿದ್ದನಗೌಡ ಆರ್. ಉಪಸ್ಥಿತರಿದ್ದರು. ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ರಾಣಿಬಾಯಿ ಪಾಟೀಲ ಸ್ವಾಗತಿಸಿ ನಿರೂಪಿಸಿದರು. ಕು. ಲೀನಾ ಪ್ರಾರ್ಥಿಸಿದರು. ಪ್ರಾಣಿಶಾಸ್ತ್ರದ ಪ್ರಾಧ್ಯಾಪಕಿ ಪಲ್ಲವಿ ವಂದಿಸಿದರು.