ತಂಬಾಕು ಸೇವನೆಯಿಂದ ದೂರವಿರಿ

ಕಲಬುರಗಿ:ಮೇ.31: ನಮ್ಮ ದೇಶದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಯುವ ಶಕ್ತಿಯಿದೆ. ರಾಷ್ಟ್ರ ಅಭಿವೃದ್ಧಿಯಲ್ಲಿ ಸದೃಢ ಮಾನವ ಸಂಪನ್ಮೂಲ ತುಂಬಾ ಅಗತ್ಯವಾಗಿದೆ. ಅದರಲ್ಲಿಯೂ ಯುವಕರು ರಾಷ್ಟ್ರದ ಶಕ್ತಿಯಾಗಿದ್ದಾರೆ. ಇಂತಹ ಶಕ್ತಿಗಳು ತಂಬಾಕುಯುಕ್ತ ವಸ್ತುಗಳ ವ್ಯಸನಿಗಳಾಗಿ, ಅದಕ್ಕೆ ಬಲಿಯಾಗುತ್ತಿದ್ದಾರೆ. ಜೀವನವನ್ನು ಆಯ್ಕೆ ಮಾಡಿಕೊಳ್ಳಬೇಕೆ ಹೊರತು, ತಂಬಾಕನಲ್ಲ. ತಂಬಾಕು ರಹಿತ ಜೀವನಶೈಲಿ ಅಳವಡಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಸಮಗ್ರ ವೈದ್ಯಕೀಯ ಸಂಘ(ನೀಮಾ)ದ ಜಿಲ್ಲಾಧ್ಯಕ್ಷ ಡಾ.ಪ್ರಮೋದ ಗುಂಡಗುರ್ತಿ ಸಲಹೆ ನೀಡಿದರು.
ನಗರದ ಖಾದ್ರಿ ಚೌಕ್‍ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಜರುಗಿದ ‘ವಿಶ್ವ ತಂಬಾಕು ರಹಿತ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ತಂಬಾಕು ಹಾಗೂ ಅದರ ಉತ್ಪನ್ನಗಳು, ಗುಟಕಾದಿಂದ ಕ್ಯಾನ್ಸರ್ ರೋಗ ಉಂಟಾಗುತ್ತದೆ. ಅನ್ನನಾಳಕ್ಕೆ ಆಸಿಡ್ ಸುರಿದು, ಹೊಟ್ಟೆ ನೋವು, ಗಂಟಲು ಕ್ಯಾನ್ಸರ್, ಪಾರ್ಕಿನಸನ್ ರೋಗ, ನಪುಂಸತತ್ವದಂತಹ ರೋಗಗಳು ಉಂಟಾಗುತ್ತವೆ. ಗುಟಕಾ ಸೇವಿಸುವುದರಿಂದ ಬಾಯಿಯ ಲೋಳೆಪರೆಯು ಗಡುಸಾಗಿ, ಬಾಯಿಯ ಚಟುವಟಿಕೆಗಳಿಗೆ ಅಡ್ಡಿ ಉಂಟಾಗಿ, ಕೊನೆಗೆ ಅದರ ಚಟುವಟಿಕೆ ಸ್ಥಗಿತಗೊಳಿಸುತ್ತದೆ. ಇದರಲ್ಲಿರುವ ಮೆಂಥೋಲ್ ಅಂಶ ಬಾಯಿಯ ಕ್ಯಾನ್ಸರ್‍ಗೆ ಕಾರಣವಾಗುತ್ತದೆ. ಅನ್ನ ನಾಳದಲ್ಲಿ ಹುಣ್ಣಾಗುವುದು, ಆಹಾರ ಸೇವಿಸಿದರೆ ವಾಂತಿಯಾಗುವುದು, ಪುರಶತ್ವ, ಬಂಜೆತನ ಸೇರಿದಂತೆ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ತಂಬಾಕು ಸೇವನೆ, ಧೂಮಪಾನ ಮಾಡಬೇಡಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕರಾದ ಸೈಯದ್ ಹಮೀದ್, ಪೂಜಾ ಜಮಾದಾರ, ಐಶ್ವರ್ಯ ಬಿರಾದಾರ, ಪೂಜಾ ಹೂಗಾರ ಹಾಗೂ ಸಂಸ್ಥೆಯ ವಿದ್ಯಾರ್ಥಿಗಳು ಹಾಜರಿದ್ದರು.