ತಂಬಾಕು ಮುಕ್ತ ಯುವ ಪೀಳಿಗೆ ಆದಲ್ಲಿ ಯುವ ದಿನಾಚರಣೆ ಸಾರ್ಥಕ

ದಾವಣಗೆರೆ ಜ.12; ರಾಷ್ಟ್ರ ನಿರ್ಮಾಣಕ್ಕಾಗಿ ಯುವ ಶಕ್ತಿಯನ್ನು ಉತ್ತೇಜಿಸುವುದು ರಾಷ್ಟ್ರೀಯ ಯುವ ದಿನಾಚರಣೆಯ ಉದ್ದೇಶವಾಗಿದ್ದು ಅದರಂತೆ ತಂಬಾಕು ಮುಕ್ತ ಯುವ ಪೀಳಿಗೆ ಹಾಗೂ ತಂಬಾಕು ಮುಕ್ತ ಸಂಸ್ಥೆಯನ್ನಾಗಿ ಮಾಡಿದ್ದೇ ಆದಲ್ಲಿ ಈ ದಿನದ ಉದ್ದೇಶ ಸಾರ್ಥಕವಾಗುತ್ತದೆಂದು ಡಿಹೆಚ್‍ಓ ಡಾ.ನಾಗರಾಜ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮತ್ತು ಸಿ.ಜಿ ಸ್ಕೂಲ್ ಆಫ್ ನರ್ಸಿಂಗ್, ದಾವಣಗೆರೆ ಇವರ ಸಹಯೋಗದಲ್ಲಿ ಮಂಗಳವಾರದಂದು ಶ್ರೀಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವಕರ ದಿನಾಚರಣೆ ಅಂಗವಾಗಿ ನಗರದ ಸಿ.ಜಿ.ಆಸ್ಪತ್ರೆ ಮುಂಭಾಗದಲ್ಲಿ ಏರ್ಪಡಿಸಲಾಗಿದ್ದ ಜಾಗೃತಿ ಗುಲಾಬಿ ಆಂದೋಲನ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ತಂಬಾಕು ನಿಯಂತ್ರಣಕ್ಕಾಗಿ ಕೋಟ್ಪಾ-2003 ರ ಕಾಯ್ದೆಯ ಸೆಕ್ಷನ್-6ಬಿ ಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಗುಲಾಬಿ ನೀಡುವ ಮೂಲಕ ಗುಲಾಬಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ರಾಘವನ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಾದ್ಯಂತ ಎಲ್ಲ ತಾಲ್ಲೂಕುಗಳಲ್ಲಿ ಇಂದು ಗುಲಾಬಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚಿಸಲಾಗಿದೆ. ಹಾಗೂ ದಾವಣಗೆರೆ ನಗರದಲ್ಲಿಯೂ ಸಹ ಇಂದು ಗುಲಾಬಿ ಆಂದೋಲನ ಹಮ್ಮಿಕೊಳ್ಳಲಾಗಿದೆ.
ಯಾವುದೇ ಶೈಕ್ಷಣಿಕ ಸಂಸ್ಥೆಯ 100 ಗಜದೊಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ತೆಡೆಯುವುದನ್ನು ಗುರಿಯಾಗಿಸಿಕೊಂಡು ಈ ವ್ಯಾಪ್ತಿಯಲ್ಲಿರುವ ಅಂಗಡಿಗಳ ಮಾಲೀಕರಿಗೆ ಒಂದು ಗುಲಾಬಿ ಹೂ ಮತ್ತು ಕರ ಪತ್ರ ನೀಡುವುದರೊಂದಿಗೆ ಯುವಕರು ತಂಬಾಕು ಉತ್ಪನ್ನಗಳ ದುಶ್ಚಟಕ್ಕೆ ಬಲಿಯಾಗುತ್ತಿರುವ ಬಗ್ಗೆ ಮಾಹಿತಿ ನೀಡಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಮನವೊಲಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ಮೀನಾಕ್ಷಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಉಮಾಪತಿ, ನರ್ಸಿಂಗ್ ಕಾಲೇಜಿನ ಪ್ರಾಧ್ಯಾಪಕ ರಾಮಚಂದ್ರಪ್ಪ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ್, ಸಮಾಜ ಕಾರ್ಯಕರ್ತ ದೇವರಾಜ್ ಕೆ.ಪಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರು, ನರ್ಸಿಂಗ್ ಕಾಲೇಜಿನ ವಿಧ್ಯಾರ್ಥಿಗಳು ಮತ್ತು ಸಿಬ್ಬಂದಿಯವರು ಹಾಜರಿದ್ದರು.