ತಂಬಾಕು ಮುಕ್ತ ದಿನಾಚರಣೆ:ಜನಜಾಗೃತಿ ಜಾಥಾ


ಸಂಜೆವಾಣಿ ವಾರ್ತೆ
ಹೊಸಪೇಟೆ, ಜೂ.01: ದೇಹಾರೋಗ್ಯಕ್ಕೆ ಮಾರಕವೆಂಬ ಅರಿವಿದ್ದರೂ ಸಹ ನಿರಂತರ ತಂಬಾಕು ಸೇವನೆ ಮಾಡುತ್ತಿರುವುದು ವಿಷಾದಕರ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ. ಬೇಸರ ವ್ಯಕ್ತಪಡಿಸಿದರು.
ಬುಧವಾರ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜನಜಾಗೃತಿ ಜಾಥಾಗೆ ಹಸಿರು ನಿಶಾನೆ ತೋರಿ ಚಾಲನೆ ನೀಡುವ ಮುನ್ನ ಮಾತನಾಡಿದ ಅವರು ರಾಷ್ಟ್ರವನ್ನು ಸುಭದ್ರದೆಡೆಗೆ ಕೊಂಡ್ಯೊಯ್ಯಲು ಸಾರ್ವಜನಿಕರು ಮುಖ್ಯವಾಗಿ ಕೈಜೋಡಿಸಬೇಕು. ತಂಬಾಕು ಉತ್ಪನ್ನಗಳು ಮಾರಕ ಎಂದು ತಿಳಿದಿದ್ದರೂ ಸಹ ಅದರ ನಿರಂತರ ಸೇವನೆಯಲ್ಲಿ ಕೆಲ ಜನರು ತೊಡಗಿದ್ದಾರೆ. ಅದರಲ್ಲೂ ಅಕ್ಷರಸ್ಥರು ಅದರ ದಾಸರಾಗಿದ್ದು, ತಂಬಾಕು ಸೇವನೆಯಿಂದ ಉಂಟಾಗುವ ಬಾಧಕಗಳ ಅರಿವು ಮೂಡಿಸಲು ಈ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಸೇರಿದಂತೆ ಸಂಘ-ಸಂಸ್ಥೆಗಳು ಸಹ ತಂಬಾಕು ಮುಕ್ತ ಜಿಲ್ಲೆಯಾಗಿಸಲು ಶ್ರಮಿಸಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಕಿಶನ್ ಬಿ. ಮಾಡಲಗಿ ಅವರು ಮಾತನಾಡಿ ತಂಬಾಕು ಉತ್ಪನ್ನಗಳು ಕೇವಲ ಅದನ್ನು ಬಳಸುವ ವ್ಯಕ್ತಿಗೆ ಮಾರವಾಗುವ ಜೊತೆಗೆ ಆತನ ಕುಟುಂಬದ ಆರ್ಥಿಕತೆಯ ಮೇಲೂ ಹಂತಹಂತವಾಗಿ ದುಷ್ಪರಿಣಾಮ ಬೀರುತ್ತದೆ ಜನಜಾಗೃತಿ ಮೂಡಿಸುವ ಪರಿಣಾಮದಿಂದ ತಂಬಾಕು ಉತ್ಪನ್ನಗಳ ವ್ಯಸನಕ್ಕೆ ಒಳಪಟ್ಟವರು ಜಾಗೃತಗೊಳ್ಳುತ್ತಾರೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಲೀಂ ಅವರು ಈ ವರ್ಷದ ಘೋಷವಾಕ್ಯ “ನಮಗೆ ಆಹಾರ ಬೇಕು, ತಂಬಾಕು ಅಲ್ಲ” ಎಂಬುದಾಗಿದೆ. 3.5 ಹೆಕ್ಟೇರ್ ವಿಸ್ತೀರ್ಣದಷ್ಟು ಭೂಮಿಯನ್ನು ತಂಬಾಕು ಬೆಳೆಯಲು ಉಪಯೋಗಿಸಲಾಗುತ್ತಿದೆ. ಇದರಿಂದ ಅಗತ್ಯ ಆಹಾರ ಉತ್ಪನ್ನ ಬೆಳೆಯಲು ಅಡ್ಡಿಯಾಗುವ ಜೊತೆಗೆ ಭೂಮಿ ಫಲವತ್ತತೆ ಸಹ ಕುಸಿಯುತ್ತಿದೆ. ತಂಬಾಕು ಉತ್ಪನ್ನಗಳನ್ನು ಬೆಳೆಯುವ ಬದಲಾಗಿ ಆಹಾರ ಪದಾರ್ಥ ಬೆಳೆಯಲು ಪೂರಕವಾಗಿ ಜಾಗೃತಿ ಸಹ ಮೂಡಿಸಲಾಗುತ್ತಿದೆ ಎಂದರು.
ಜನಜಾಗೃತಿ ಜಾಥಾ ಆರಂಭಕ್ಕೂ ಮುನ್ನ ತಂಬಾಕು ಮುಕ್ತ ಸಮಾಜದ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ನಗರದ ಪ್ರಮುಖ ರಸ್ತೆಗಳಲ್ಲಿ ತಂಬಾಕು ಮುಕ್ತ ಯುವ ಜನತೆ ಅಭಿಯಾನದ ಅಂಗವಾಗಿ ಜನಜಾಗೃತಿ ಜಾಥಾ ಕೈಗೊಳ್ಳಲಾಯಿತು. ಈ ಜಾಥಾದಲ್ಲಿ ವಿವಿಧ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ ಆಶಾ ಕಾರ್ಯಕರ್ತೆಯರು, ನರ್ಸಿಂಗ್ ವಿದ್ಯಾರ್ಥಿಗಳು, ಭಾರತೀಯ ರೆಡ್‍ಕ್ರಾಸ್ ಸೊಸೈಟಿ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಸ್ಥೆಯ ಸದಸ್ಯರು ಸಹಭಾಗಿಯಾದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಂಕಮ್ಮ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮ ಅಧಿಕಾರಿ ಡಾ.ಷಣ್ಮುಖ ನಾಯ್ಕ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಸವರಾಜ್, ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ.ದೊಡ್ಡಮನಿ ಅಧಿಕಾರಿಗಳು ಪಾಲ್ಗೊಂಡಿದ್ದರು.