ತಂಬಾಕು ಮುಕ್ತ ಜಿಲ್ಲೆಗೆ ಕೈಜೋಡಿಸಲು ಮನವಿ

ಚಿತ್ರದುರ್ಗ.ಜೂ.೧; ತಂಬಾಕು ಮುಕ್ತ ಜಿಲ್ಲೆಗೆ ಎಲ್ಲರೂ ಕೈಜೋಡಿಸಿಬೇಕು. ತಂಬಾಕಿನಿಂದ ಆಗುವ ದುಷ್ಪಾರಿಣಾಮಗಳ ಬಗ್ಗೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಕಿವಿಮಾತು ಹೇಳಿದರು.ನಗರದ ಎಸ್‍ಜೆಎಂ ದಂತ ವೈದ್ಯಕೀಯ ಕಾಲೇಕು ಅವರಣದಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಎಸ್‍ಜೆಎಂ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಎಸ್‍ಜೆಎಂ ಕಾನೂನು ಮಹಾವಿದ್ಯಾಲಯ ವತಿಯಿಂದ ಆಯೋಜಿಸಿದ್ದ ವಿಶ್ವ ತಂಬಾಕು ರಹಿತ ದಿನದ ಪ್ರಯುಕ್ತ ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.ತಂಬಾಕಿನಿಂದ ದೇಹಕ್ಕೆ ಮತ್ತು ಆರೋಗ್ಯಕ್ಕೆ ಬೀರುವ ದುಷ್ಪಾರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ವಿಶೇಷವಾಗಿ ಯುವ ಜನತೆ ಹಾಗೂ ಸಾರ್ವಜನಿಕರು ತಂಬಾಕು ತ್ಯಜಿಸುವ ಕಡೆಗೆ ಗಮನ ನೀಡಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರತಿ ವರ್ಷವೂ ತಂಬಾಕು ದಿನಾಚರಣೆ ಆಚರಣೆ ಮಾಡಲಾಗುತ್ತಿದೆ. “ನಮಗೆ ಆಹಾರ ಬೇಕು, ತಂಬಾಕು ಅಲ್ಲ” ಎಂಬುದು ಈ ವರ್ಷದ ಘೋಷವಾಕ್ಯವಾಗಿದ್ದು, ತಂಬಾಕು ಸೇವನೆ ಅಕ್ಕದಲ್ಲಿ ಇರುವಂತಹ ಜನರಿಗೂ ಸಹ ದುಷ್ಪಾರಿಣಾಮ ಉಂಟಾಗುತ್ತದೆ. ಒಬ್ಬ ವ್ಯಕ್ತಿ ತಂಬಾಕಿಗೆ ದಾಸರಾದರೆ ಇಡೀ ಕುಟುಂಬ ಹಾಗೂ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ. ತಂಬಾಕು ಸೇವೆನೆಯ ಅಭ್ಯಾಸ ಬಿಡಲು ವ್ಯಸನ ಮುಕ್ತ ಕೇಂದ್ರಗಳು ಇವೆ ಎಂದರು.ಸಾರ್ವಜನಿಕರು ತಂಬಾಕುನಿಂದಾಗುವ ದುಷ್ಪಾರಿಣಾಮಗಳ ಕುರಿತು ತಿಳುವಳಿಕೆ ಪಡೆಯಬೇಕು.  ತಂಬಾಕಿನಿಂದ ಬರುವಂತಹ ರೋಗಗಳನ್ನು ತಡೆಗಟ್ಟಲು ಬೀದಿ ನಾಟಕ ಮತ್ತು ಜಾಥಾ ಕಾರ್ಯಕ್ರಮಗಳ ಮೂಲಕ ಪರಿಣಾಮಕಾರಿಯಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಮೂಲಕ ಚಿತ್ರದುರ್ಗ ಜಿಲ್ಲೆಯನ್ನು ತಂಬಾಕು ಮುಕ್ತ ಜಿಲ್ಲೆಯಾಗಿ ಮಾಡಬೇಕು ಎಂದು ಕರೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ವಿಜಯ್ ಮಾತನಾಡಿ, ಎನ್‍ಟಿಸಿಪಿ ಮಾಹಿತಿ ಪ್ರಕಾರ ತಂಬಾಕು ಸೇವನೆಯಲ್ಲಿ ರಾಜ್ಯದಲ್ಲಿ ಚಿತ್ರದುರ್ಗ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಹಾಗಾಗಿ ಜಿಲ್ಲೆಯಲ್ಲಿ ತಂಬಾಕು ದುಷ್ಪಾರಿಣಾಮಗಳ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.ವಿಶ್ವ ತಂಬಾಕು ರಹಿತ ದಿನ ಅಂಗವಾಗಿ ಚಿತ್ರದುರ್ಗ ನಗರದ ಎಸ್‍ಜೆಎಂ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆವರಣದಲ್ಲಿ ಆರಂಭವಾದ ಜಾಗೃತಿ ಜಾಥಾವು ಬಿ.ಡಿ.ರಸ್ತೆಯ ಮೂಲಕ ಎಸ್‍ಬಿಎಂ ವೃತ್ತದ ಮೂಲಕ ಸಾಗಿ ಗಾಂಧಿವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ನಂತರ ಅದೇ ಮಾರ್ಗವಾಗಿ ಎಸ್‍ಜೆಎಂ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಆವರಣದಲ್ಲಿ ಸಮಾಪನೆಗೊಂಡಿತು.ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು  ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್. ರಂಗನಾಥ್, ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ.ಎನ್.ಕಾಶೀ, ಎಸ್‍ಜೆಎಂ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಪ್ರಾಂಶುಪಾಲೆ ಡಾ.ಆರ್.ಗೌರಮ್ಮ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ.ಶಿವುಯಾದವ್, ಉಪಾಧ್ಯಕ್ಷ ಜಿ.ಸಿ.ದಯಾನಂದ, ಡೇಟ್ ಚಾರಿಟೇಬಲ್ ಸೊಸೈಟಿಯ ಡಾ.ಹೆಚ್.ಎಸ್.ಶಿವಣ್ಣ, ಎಸ್‍ಜೆಎಂ ಕಾನೂನು ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಎಸ್.ದಿನೇಶ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ್, ಸಮಾಜ ಕಾರ್ಯಕರ್ತ ಕೆ.ಎಂ.ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.