
ಚಿತ್ರದುರ್ಗ.ಮೇ.೨೦; ಜಿಲ್ಲೆಯಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ರಂಗನಾಥ್, ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ.ಎನ್.ಕಾಶೀ ಅವರ ಮಾರ್ಗದರ್ಶನದಲ್ಲಿ ಕೋಟ್ಪಾ-2003ರ ಕಾಯ್ದೆಯ ಕುರಿತು ಚಳ್ಳಕೆರೆ, ಹೊಳಲ್ಕೆರೆ ಹಾಗೂ ಹೊಸದುರ್ಗ ನಗರ ಪ್ರದೇಶಗಳಲ್ಲಿ ಜಿಲ್ಲಾಮಟ್ಟದ ತಂಬಾಕು ತನಿಖಾ ತಂಡವು ತಂಬಾಕು ಉತ್ಪನ್ನಗಳ ಮಾರಾಟಗಾರರ ಅಂಗಡಿಗಳಿಗೆ ದಾಳಿ ನಡೆಸಿ ದಂಡ ವಿಧಿಸಿದೆ.ತಂಬಾಕು ಮತ್ತು ಕೊರೋನಾ ಕುರಿತು ಸಾರ್ವಜನಿಕರಲ್ಲಿ ಮತ್ತು ಅಂಗಡಿ ಮಾಲೀಕರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡದಂತೆ, ಪಾನ್ ಮಸಾಲ, ತಂಬಾಕು ಜಗಿದು ಉಗಿಯದಂತೆ ತಡೆಗಟ್ಟಲು ಜಾಗೃತಿ ಮೂಡಿಸಲಾಯಿತು.ಸಂಬಂಧಪಟ್ಟ ಸೆಕ್ಷನ್-4, 6ಎ ಮತ್ತು 6ಬಿ ಬೋರ್ಡ್‍ಗಳನ್ನು ಹಾಕಲು ಸೂಚಿಸಲಾಯಿತು ಮತ್ತು ಸೆಕ್ಷನ್-4 ಅಡಿಯಲ್ಲಿ 40 ಕೇಸುಗಳನ್ನು ದಾಖಲಿಸಿ ರೂ. 3950 ದಂಡವನ್ನು, ಸೆಕ್ಷನ್-6ಎ ಅಡಿಯಲ್ಲಿ 10 ಕೇಸುಗಳನ್ನು ದಾಖಲಿಸಿ ರೂ. 1350 ದಂಡವನ್ನು ಮತ್ತು ಸೆಕ್ಷನ್-6ಬಿ ಅಡಿಯಲ್ಲಿ 05 ಕೇಸುಗಳನ್ನು ದಾಖಲಿಸಿ ರೂ. 700 ದಂಡ ವಸೂಲಿ ಮಾಡಲಾಯಿತು.ತಂಬಾಕು ದಾಳಿಯಲ್ಲಿ ಜಿಲ್ಲಾಮಟ್ಟದ ತನಿಖಾ ತಂಡದ ಅಧಿಕಾರಿಗಳಾದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ. ಪ್ರಭುದೇವ್, ಸಮಾಜ ಕಾರ್ಯಕರ್ತ ಕೆ.ಎಂ.ತಿಪ್ಪೇಸ್ವಾಮಿ, ತಾಲ್ಲೂಕು ಮಟ್ಟದ ಚಳ್ಳಕೆರೆ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿಯವರು, ನಗರಸಭೆಯವರು, ಪೋಲಿಸ್ ಇಲಾಖೆಯವರು, ಹೊಳಲ್ಕೆರೆ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿಯವರು, ಪೋಲಿಸ್ ಇಲಾಖೆಯವರು, ಹೊಸದುರ್ಗ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿಯವರು ಭಾಗವಹಿಸಿದ್ದರು.