ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘನೆ : 16 ಪ್ರಕರಣ ದಾಖಲು

ದಾವಣಗೆರೆ.ಡಿ.೧; ಜಿಲ್ಲಾ ತಂಬಾಕು ನಿಯಂತ್ರಣ ತಂಡವು ಆನಗೋಡು ಹಾಗೂ ಹೆಬ್ಬಾಳು ಗ್ರಾಮದ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ ಒಟ್ಟು 16 ಪ್ರಕರಣ ದಾಖಲಿಸಿದ್ದು, 1800 ರೂ. ದಂಡ ವಸೂಲಿ ಮಾಡಿದ್ದಾರೆ.ತನಿಖಾ ತಂಡವು ಆನಗೋಡು ಹಾಗೂ ಹೆಬ್ಬಾಳು ಗ್ರಾಮಗಳ ರಸ್ತೆಯ ಸುತ್ತ-ಮುತ್ತ ಹೋಟೆಲ್, ಅಂಗಡಿ ಮಳಿಗೆ, ಪಾನ್‌ಶಾಪ್. ಬಾರ್ ಇತ್ಯಾದಿ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನ ಮಾರುವವರನ್ನು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನ ಸೇವಿಸುವವರಿಗೆ ಸ್ಥಳದಲ್ಲೆ ದಂಡ ಹಾಕುವ ಮೂಲಕ ಜಾಗೃತಿ ಮೂಡಿಸಲಾಯಿತು. ಸಾರ್ವಜನಿಕ ಸ್ಥಳದಲ್ಲಿರುವ ಅಂಗಡಿ ಮಾಲಿಕರು ಧೂಮಪಾನ ನಿಷೇಧದ ನಾಮಫಲಕವನ್ನು ಕಟ್ಟು-ನಿಟ್ಟಾಗಿ ಪ್ರದರ್ಶಿಸಲು ಹಾಗೂ ಅಳವಡಿಸಲು ತಾಕೀತು ಮಾಡಲಾಯಿತು.ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಅಧಿನಿಯಮ-2003 ರ ಸೆಕ್ಷನ್-4 ರ ಅಡಿ 10 ಪ್ರಕರಣ ದಾಖಲಿಸಿದ್ದು 1200 ರೂ ದಂಡ ಹಾಗೂ ಸೆಕ್ಷನ್-6ಎ ಅಡಿ 4 ಪ್ರಕರಣ ದಾಖಲಿಸಿದ್ದು 400 ರೂ ದಂಡ, 6ಬಿ ಅಡಿ 2 ಪ್ರಕರಣ ದಾಖಲಿಸಿದ್ದು 200 ರೂ ದಂಡ ಸೇರಿದಂತೆ ಒಟ್ಟು 16 ಪ್ರಕರಣ ದಾಖಲಿಸಿದ್ದು, ಸ್ಥಳದಲ್ಲೆ 1800 ರೂ ದಂಡ ವಸೂಲಿ ಮಾಡಲಾಗಿದೆ.ತಂಬಾಕು ತನಿಖಾ ತಂಡದಲ್ಲಿ ವೈದ್ಯಾಧಿಕಾರಿ ಡಾ.ರಾಘವೇಂದ್ರ, ಗ್ರಾಮಾಂತರ ಪೊಲೀಸ್ ಠಾಣೆ ಪಿ.ಎಸ್.ಐ ಪುಷ್ಪಲತಾ, ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ್, ಬಿ.ಹೆಚ್.ಈ.ಓ ಉಮಾಪತಿ, ಆರೋಗ್ಯ ನಿರೀಕ್ಷಣಾಧಿಕಾರಿ ಅಂಜನಪ್ಪ.ಬಿ, ಬಿ.ಹೆಚ್.ಈ.ಓ ಗಾಯತ್ರಿ, ಗ್ರಾಮಾಂತರ ಪೊಲೀಸ್ ಠಾಣೆ ಪಿ.ಸಿ ಮಹೇಶ್.ಎ.ಸಿ ಹಾಗೂ ಆನಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿರುತ್ತದೆ.