ತಂಬಾಕು ನಿಯಂತ್ರಣ ಇಲಾಖೆ ಬದ್ಧತೆಯಿಂದ ಕಾರ್ಯ ನಿರ್ವಹಿಸಿ


ರಾಯಚೂರು.ಡಿ.೨೪-ತಂಬಾಕು ಸೇವನೆ ನಿಯಂತ್ರಿಸಲು ಕಟ್ಟಾಜ್ಞೆಗಳು ಹೊರಡಿಸಲಾಗಿದ್ದು, ಜಿಲ್ಲೆಯನ್ನು ತಂಬಾಕು ಮುಕ್ತವನ್ನಾಗಿಸಲು ಎಲ್ಲಾ ಇಲಾಖೆಗಳು ಬದ್ಧತೆಯಿಂದ ಕಾರ್ಯನಿರ್ವಹಿಸಿದಾಗ ಸಾಧ್ಯವಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ದುರ್ಗೇಶ ಹೇಳಿದರು.
ಅವರಿಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತಂಬಾಕು ನಿಯಂತ್ರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಯುವ ಸಮುದಾಯ, ವೃದ್ಧರು, ಮಹಿಳೆಯರು ಸೇರಿ ಮಕ್ಕಳೂ ಸಹ ತಂಬಾಕು ಸೇವನೆಯ ಚಟಕ್ಕೆ ಅಂಟಿಕೊಂಡಿದ್ದಾರೆ. ಆರೋಗ್ಯಕ್ಕೆ ಹಾನಿಕರವಾಗಿದ್ದರೂ ತಂಬಾಕು ಸೇವನೆ ವಿಪರೀತವಾಗುತ್ತಿದೆ. ಇದನ್ನು ನಿಯಂತ್ರಿಸಲು ಇಲಾಖೆಗಳು ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಜಾಗೃತಿಯ ಜೊತೆಗೆ ಜನರಲ್ಲಿ ತಿಳುವಳಿಕೆ ಮೂಡಿಸುವ ಕಾರ್ಯ ಮಾಡಬೇಕಾಗಿದೆ. ಇದಕ್ಕೆಂದು ಜಿಲ್ಲೆಯಾದ್ಯಂತ ೬೦ ಕ್ಯಾಂಪ್‌ಗಳ ಮೂಲಕ ೧೬೧ ಫೋಕಸ್ ಬೂತ್‌ಗಳನ್ನು ಸ್ಥಾಪಿಸಿದ್ದು, ಈ ಮೂಲಕ ಜಾಗೃತಿಗೆ ಅಣೆಯಾಗಿದ್ದೇವೆ. ತಂಬಾಕು ಸೇವನೆ ನಿಯಂತ್ರಣಕ್ಕೆ ಅಧಿಕಾರಿಗಳು ಮುತುವರ್ಜಿವಹಿಸಿ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು.
ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ಶಾಲೆಗಳ ಸುತ್ತಮುತ್ತ ತಂಬಾಕು ಮಾರಾಟ ಮಾಡದಂತೆ ಸೂಚಿಸಲಾಗಿದೆ. ೧೦ ವರ್ಷದ ವಿದ್ಯಾರ್ಥಿಗಳು ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಶಾಲಾ ಸಂಕೀರ್ಣದಲ್ಲಿ ಪ್ರತಿ ತಿಂಗಳು ಸಿ.ಆರ್.ಪಿ ಸಭೆಯಲ್ಲಿ ತಂಬಾಕು ನಿಯಂತ್ರಣ ಕುರಿತು ಜಾಗೃತಿ ಮೂಡಿಸಬೇಕು. ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ತಂಬಾಕು ಮಾರಾಟ ಮಾಡುವ ಅಂಗಡಿಗಳಿಗೆ ನೋಟಿಸ್ ನೀಡುವುದರ ಜೊತೆಗೆ ಅಂಗಡಿಗಳನ್ನು ಸೀಜ್ ಮಾಡಬೇಕು, ನಗರಸಭೆಯು ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆ ಮಾಡುವವರ ಮೇಲೆ ದಂಡ ವಿಧಿಸಬೇಕು, ಅಬಕಾರಿ ಇಲಾಖೆಯ ಅಧಿಕಾರಿಗಳು ಬಾರ್‍ಗಳ ಮುಂದೆ ತಂಬಾಕು ಮಾರಾಟ ಮಾಡುವವರ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಂಡು, ಬಾರ್ ಮಾಲೀಕರು ಸೇರಿದಂತೆ ತಂಬಾಕು ಮಾರಾಟ ಮಾಡುವವರಿಗೆ ದಂಡ ವಿಧಿಸಬೇಕು, ಪ್ರವಾಸೋದ್ಯಮ ಇಲಾಖೆ ಪ್ರವಾಸಿ ತಾಣಗಳಲ್ಲಿ ತಂಬಾಕು ಮಾರಾಟ ಹಾಗೂ ಸೇವನೆಯನ್ನು ನಿಯಂತ್ರಿಸಬೇಕು ಸಾರಿಗೆ ಇಲಾಖೆಗಳು ಬಸ್ ನಿಲ್ದಾಣಗಳಲ್ಲಿ ತಂಬಾಕು ಮಾರಾಟ ನಿಷೇಧಿಸಬೇಕು, ಹಾಗೂ ಎಲ್ಲಾ ಸರ್ಕಾರಿ ಕಚೇರಿಗಳಲ್ಲು ತಂಬಾಕು ಸೇವನೆ ನಿಯಂತ್ರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಸಂತೋಷ ಕಾಮಗೌಡ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ತಸಿಲ್ದಾರ್ ಹಂಪಣ್ಣ ಸಜ್ಜನ್ ಸೇರಿದಂತೆ ತಂಬಾಕು ನಿಯಂತ್ರಣಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.