ತಂಬಾಕು ತ್ಯಜಿಸಲು ಲಾಕ್‌ಡೌನ್ ಸುಸಂದರ್ಭವಾಗಿದೆ

ದಾವಣಗೆರೆ ಜೂ.3:ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ವಿಶ್ವ ಆರೋಗ್ಯ ಸಂಸ್ಥೆಯು ಘೋಷಿಸಿರುವ “ತಂಬಾಕು ತ್ಯಜಿಸಲು ಬದ್ಧರಾಗಿರಿ” ಘೋಷಣಾ ವಾಕ್ಯದ ಮಹತ್ವದ ಬಗ್ಗೆ ಕೋವಿಡ್ ಹರಡುತ್ತಿರುವ ಈ ಸಂದರ್ಭದಲ್ಲಿ ಚರ್ಚೆ ನಡೆಸುವುದು ಅತ್ಯಂತ ಅಗತ್ಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಹೇಳಿದರು. ತಂಬಾಕು ಉತ್ಪನ್ನಗಳ ಬಳಕೆ ಬಗ್ಗೆ ಚರ್ಚೆ ಮಾಡುವುದು ಈಗ ಸೂಕ್ತ ಸಂದರ್ಭವಾಗಿದೆ. ಏಕೆಂದರೆ ತಂಬಾಕು ಬಳಕೆ ಮಾಡುವುದರಿಂದ ಕರೋನ ಹರಡುವ ಸಂದರ್ಭಗಳೇ ಹೆಚ್ಚು ಹಾಗೂ ತಂಬಾಕು ಬಳಸುವವರಿಗೆ ಕರೋನ ಬರುವ ಅವಕಾಶಗಳೇ ಹೆಚ್ಚಾಗಿರುತ್ತದೆ. ಹಲವಾರು ದಿನಗಳಿಂದ ತಂಬಾಕು ಬಳಸಿದ್ದರಿಂದ ಅಂತಹವರ ಶ್ವಾಸಕೋಶ ದುರ್ಬಲವಾಗಿರುತ್ತದೆ. ಹೀಗಾಗಿ ಬೇರೆಯವರಿಗಿಂತ ಇವರು ಹೆಚ್ಚು ಅಪಾಯ ಎದುರಿಸುತ್ತಾರೆ ಹಾಗೂ ಸಾವು ಸಂಭವಿಸಬಹುದು. ಲಾಕ್ ಡೌನ್ ಅವಧಿಯನ್ನು ತಂಬಾಕು ತ್ಯಜಿಸಲು ವೇದಿಕೆಯನ್ನಾಗಿ ಬಳಸಿಕೊಳ್ಳಲು ಸೂಕ್ತ. ತಂಬಾಕು ಮಾನವನ ದೇಹದ ಪ್ರತಿ ಅಂಗಾಂಗಗಳಿಗೂ ಖಾಯಿಲೆ ತರುವಂತಹ ಪದಾರ್ಥವಾಗಿದ್ದು ಇದರಿಂದ ಆರ್ಥಿಕ ಪರಿಸ್ಥಿತಿ, ಸಾವು ನೊವುಗಳನ್ನು ಗಮನದಲ್ಲಿಟ್ಟುಕೊಂಡು ಉಚಿತವಾಗಿ ತಜ್ಞರಿಂದ ಆಪ್ತಸಮಾಲೋಚನೆ ಮತ್ತು ಚಿಕಿತ್ಸೆಯನ್ನು ಪಡೆಯುವ ಮೂಲಕ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಲು ಹಾಗೂ ಕೋವಿಡ್ 19 ರೋಗವನ್ನು ನಿಂಯತ್ರಿಸಲು ಸಹಕಾರಿಯಾಗಬೇಕೆಂದು ಅಪರ ಜಿಲ್ಲಾಧಿಕಾರಿ ಹೇಳಿದರು. ತಂಬಾಕು ನಿಯಂತ್ರಣ ನೋಡಲ್ ಅಧಿಕಾರಿಗಳು ಸೇರಿದಂತೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ತಂಬಾಕು ಮುಕ್ತ ಸಮಾಜದ ಕುರಿತು ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.