
ಕಲಬುರಗಿ,ಮಾ.18-ಕಳೆದ ರಾತ್ರಿ ನಗರವು ಸೇರಿದಂತೆ ಜಿಲ್ಲೆಯ ಹಲವು ಕಡೆ ಆಲಿಕಲ್ಲು ಸಹಿತ ಮಳೆಯಾಗಿದೆ. ಇದರಿಂದ ಬಿಸಲನಾಡು ತಂಪಾಗಿದೆ. ರಾತ್ರಿ 10 ಗಂಟೆ ಸುಮಾರಿಗೆ ಸುರುವಾದ ಎರಡ್ಮೂರು ತಾಸು ಎಡೆಬಿಡದೆ ಸುರಿದಿದೆ.
ಅಕಾಲಿಕವಾಗಿ ಬಿದ್ದ ಆಲಿಕಲ್ಲು ಮಳೆಯಿಂದಾಗಿ ರಸ್ತೆಗಳಲ್ಲಿ ಕೆಲ ಸಮಯ ಹಿಮಾಲಯದ ವಾತಾವರಣ ನಿರ್ಮಾಣವಾಗಿತ್ತು. ಆಲಿಕಲ್ಲು ಮಳೆ ರಪರಪನೆ ಸುರಿದಿದ್ದರಿಂದಾಗಿ ಪತ್ರಾಸುಗಳಿದ್ದ ಮನೆಗಳ ಮೇಲೆ ಕಲ್ಲು ಸುರಿದಂತಹ ಅನುಭವವಾಗಿದೆ.
ಆಲಿಕಲ್ಲು ಮಳೆ ಕಂಡು ಜನ ದಂಗಾಗಿದ್ದಾರೆ. ಕೆಲ ದಿನಗಳಿಂದ ನಗರವು ಸೇರಿದಂತೆ ಜಿಲ್ಲೆಯಾದ್ಯಂತ ಬಿಸಿಲಿನ ತಾಪಮಾನ ಹೆಚ್ಚಾಗಿತ್ತು. ಬಿಸಲು ಹೆಚ್ಚಾಗಿದ್ದರಿಂದ ಮಧ್ಯಾಹ್ನದ ವೇಳೆ ರಸ್ತೆಗಳಲ್ಲಿ ಜನರ ಓಡಾಟ ಕಡಿಮೆಯಾಗಿತ್ತು. ಕಳೆದ ಎರಡ್ಮೂರು ದಿನಗಳಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದರಿಂದ ಬಿಸಿಲ ತಾಪ ಕಡಿಯಾಗಿತ್ತು. ಕಳೆದ ರಾತ್ರಿ ಅಕಾಲಿಕವಾಗಿ ಸುರಿದ ಆಲಿಕಲ್ಲು ಮಳೆಯಿಂದಾಗಿ ತಂಪಾದ ವಾತಾವರಣ ನಿರ್ಮಾಣವಾಗಿದೆ.
ಮಳೆ ವಿವರ:
ಬೀದರ ,ಕಲಬುರಗಿ ಜಿಲ್ಲೆಯ ಕೆಲವೆಡೆ ಆಲಿಕಲ್ಲು ಮಳೆಯಾಗಿದೆ. ಬೀದರ್ ಜಿಲ್ಲೆಯ ಹಲಬರ್ಗ, ಜನವಾಡ,ಮನ್ನಳ್ಳಿಯಲ್ಲಿ 3 ಸೆಂಮೀ,ಕಲಬುರಗಿ ಜಿಲ್ಲೆಯ ಅಫಜಲಪುರ,ಮುಧೋಳ ಮತ್ತು ಯಾದಗಿರಿ ಜಿಲ್ಲೆ ಸೈದಾಪುರ ದಲ್ಲಿ 1 ಸೆಂಮೀ ಮಳೆಯಾಗಿದೆ.ರಾಜ್ಯದ ಗರಿಷ್ಠ ಉಷ್ಣಾಂಶ 36.2 ಡಿಸೆ ಕಲಬುರಗಿಯಲ್ಲಿ ದಾಖಲಾಗಿದೆ
ತಾಪಮಾನ:
ಕಲಬುರಗಿ ಗರಿಷ್ಠ 36.2, ಕನಿಷ್ಠ 19.3 , ಬೀದರ ಗರಿಷ್ಠ 30.4, ಕನಿಷ್ಠ 15.5, ವಿಜಯಪುರ ಗರಿಷ್ಠ 33.2 ,ಕನಿಷ್ಠ 17.5 ಡಿಗ್ರಿ ಸೆಲ್ಸಿಯಸ್ ಇತ್ತು ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರಿನ ಹವಾಮಾನ ಕೇಂದ್ರ ತಿಳಿಸಿದೆ.