ತಂದೆ ತಾಯಿ ದೇವರಿಗೆ ಸಮಾನ

ಧಾರವಾಡ,ಸೆ.21: ತಂದೆ ತಾಯಿ ದೇವರಿಗೆ ಸಮಾನ. ಅವರು ನಮ್ಮ ಕಣ್ಣಿಗೆ ಕಾಣುವ ಜೀವಂತ ದೇವರು. ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ ಎಂದು ಹಿರಿಯ ಸಾಹಿತಿ ಡಾ. ಆರ್.ಬಿ. ಚಿಲುಮಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಶ್ರೀ ಗುರಪ್ಪನವರು ಶ್ರೀಮತಿ ಗೌರಮ್ಮ ಬೆಲ್ಲದ ದತ್ತಿ ಕಾರ್ಯಕ್ರಮದಲ್ಲಿ ‘ಮಾತೋಶ್ರೀ ಗೌರಮ್ಮ ಹಾಗೂ ಗುರಪ್ಪನವರು ಬೆಲ್ಲದ ಅವರ ಸ್ಮರಣೆ’ ಕುರಿತು ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ದಿ. ಗುರಪ್ಪನವರು ಹಾಗೂ ಗೌರಮ್ಮ ಬೆಲ್ಲದ ದಂಪತಿಗಳು ತಮ್ಮ ಮಕ್ಕಳಿಗೆ ಸನ್ನಡತೆ ಸಂಸ್ಕಾರ ಹಾಗೂ ಒಳ್ಳೆಯ ವಿದ್ಯೆ ನೀಡಿ, ಸುಸಂಸ್ಕøತರನ್ನಾಗಿ ಮಾಡಿದ ಪರಿಶ್ರಮ ಜೀವಿಗಳು. ತಮ್ಮ ತಂದೆ ತಾಯಿ ನೀಡಿದ ಒಳ್ಳೆಯ ಸಂಸ್ಕಾರದಿಂದಲೇ ಇಂದು ಬೆಲ್ಲದ ಸಹೋದರರು ವ್ಯವಹಾರ ಹಾಗೂ ಉದ್ಯಮ ಕ್ಷೇತ್ರದಲ್ಲಿ ಹಂತ ಹಂತವಾಗಿ ಸಾಧನೆ ಮಾಡಲು ಸಾಧ್ಯವಾಯಿತು. ಅವರ ಕರ್ತವ್ಯ ನಿಷ್ಠೆ, ಪ್ರಾಮಾಣಿಕತೆ, ಅಪಾರ ಲೋಕಾನುಭವದಿಂದ ಜನಮನ್ನಣೆಗೆ ಪಾತ್ರರಾದರು. 3 ತಲೆಮಾರಿನ ಆ ಕುಟುಂಬದಲ್ಲಿ ಇಬ್ಬರು ಶಾಸಕರಾಗಿ ಜನಪ್ರಿಯತೆ ಪಡೆದಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿರಿಯ ಗ್ರಂಥಾಲಯ ವಿಜ್ಞಾನಿಗಳಾದ ಡಾ. ಎಸ್.ಆರ್. ಗುಂಜಾಳ ಮಾತನಾಡಿ, ಗುರಪ್ಪನವರು ಹಾಗೂ ಗೌರಮ್ಮ ದಂಪತಿಗಳು ಕಾಯಕ ನಿಷ್ಠೆ ಉಳ್ಳ ಕಾಯಕಯೋಗಿಗಳು. ಅವರ ಆದರ್ಶ ವ್ಯಕ್ತಿತ್ವ ಅವರ ಮಕ್ಕಳು ಒಳ್ಳೆಯ ಸಂಸ್ಕಾರವಂತರಾಗುವಂತೆ ಮಾಡಿತು. ಇವರು ತಮ್ಮ ಮಕ್ಕಳಿಗೆ ವಿದ್ಯೆಯ ಜೊತೆಗೆ ವಿನಯ, ಸೌಜನ್ಯವನ್ನೂ ಕಲಿಸಿದ್ದರಿಂದ ಬೆಲ್ಲದ ಸಹೋದರರು ಸಾಧಕರಾಗಲು ಸಾಧ್ಯವಾಯಿತು. ವಚನ ಪಿತಾಮಹ ಫ.ಗು. ಹಳಕಟ್ಟಿಯವರ ಜೀವನ ಚರಿತ್ರೆಯ 14 ಸಾವಿರ ಗ್ರಂಥಗಳ ಪ್ರಕಟಣೆಗೆ ದಾಸೋಹಿಗಳಾಗಿ ಪ್ರಕಟಣೆಗೆ ಸಹಾಯ ಮಾಡಿದರು. ಅದರ ಫಲವೇ ಇಂದು ಚಂದ್ರಕಾಂತ ಬೆಲ್ಲದ ಅವರು ಅಗ್ರಗಣ್ಯ ಉದ್ದಿಮೆದಾರರಾಗಿದ್ದಾರೆ ಎಂದರು.
ಹಿರಿಯ ಸಾಹಿತಿಗಳಾದ ಡಾ. ಗುರುಲಿಂಗ ಕಾಪಸೆ ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿಗಳ ಪರವಾಗಿ ಕ.ವಿ.ವ. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿದರು. ಶಿವಣ್ಣ ಬೆಲ್ಲದ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಶಿವಾನಂದ ಭಾವಿಕಟ್ಟಿ, ಶಂಕರ ಹಲಗತ್ತಿ, ಡಾ. ಮಹೇಶ ಹೊರಕೇರಿ, ನಿಂಗಣ್ಣ ಕುಂಟಿ, ಸದಾನಂದ ಶಿವಳ್ಳಿ, ಎಸ್.ಜಿ. ಹಿರೇಮಠ, ಡಾ. ಪಾರ್ವತಿ ಹಾಲಭಾವಿ, ಡಾ. ಸುರೇಶ ಹಾಲಭಾವಿ, ಮನೋಜ ಪಾಟೀಲ, ಕೆ.ಎಂ. ಕೊಪ್ಪದ, ರಾಜೇಂದ್ರ ಸಾವಳಗಿ, ಶಶಿಧರ ಉಜ್ಜಿನಿ, ಡಾ. ರತ್ನಾ ಐರಸಂಗ ಸೇರಿದಂತೆ ಬೆಲ್ಲದ ಅವರ ಕುಟುಂಬದವರು ಉಪಸ್ಥಿತರಿದ್ದರು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಗುರು ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶ್ರೀಶೈಲ ಹುದ್ದಾರ ನಿರೂಪಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು.