ತಂದೆ-ತಾಯಿ ಋಣ ತೀರಿಸಲಾಗದು

ಔರಾದ: ಮೇ.31:ತಂದೆ- ತಾಯಿ ಋಣ ತೀರಿಸಲು ಆಗದು ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ಹೇಳಿದರು.
ಶ್ರೀ ಬಸವಲಿಂಗ ಅವಧೂತರ ಸೇವಾ ಸಮಿತಿ ವತಿಯಿಂದ ಬೀದರ ಜಿಲ್ಲೆಯ ಔರಾದ್ ತಾಲ್ಲೂಕಿನ ಗಡಿಕುಶನೂರ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮಕ್ಕಳ ಸಂತಸವೇ ಪಾಲಕರ ಖುಷಿ ಆಗಿರುತ್ತದೆ. ಮಕ್ಕಳಿಗಾಗಿ ಅವರು ಎಲ್ಲವನ್ನೂ ತ್ಯಾಗ ಮಾಡುತ್ತಾರೆ ಎಂದು ತಿಳಿಸಿದರು.
ಮಕ್ಕಳು ವೃದ್ಧಾಪ್ಯದಲ್ಲಿ ತಂದೆ-ತಾಯಿಯ ಸೇವೆ ಮಾಡಬೇಕು. ಅವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಜೀವನ ದೇವರು ಕೊಟ್ಟ ವರ. ಬಹಳ ಅಮೂಲ್ಯವಾಗಿದೆ. ಕೇವಲ ಹಣದ ಬೆನ್ನು ಹತ್ತಿ ನೆಮ್ಮದಿ ಹಾಳು ಮಾಡಿಕೊಳ್ಳಬಾರದು. ಕುಟುಂಬ, ಸ್ನೇಹಿತರು, ನೆರೆ ಹೊರೆಯವರೊಂದಿಗೆ ಸಂತಸದಿಂದ ಜೀವನ ಸಾಗಿಸಬೇಕು. ಜೀವನದ ನಿಜ ಆನಂದ ಅನುಭವಿಸಬೇಕು ಎಂದು ತಿಳಿಸಿದರು.
ಮಟ್ಕಾ, ಜೂಜು, ಸಾರಾಯಿ, ತಂಬಾಕು ಸೇವನೆ ಕುಟುಂಬವನ್ನು ಬೀದಿಗೆ ತರುತ್ತವೆ. ತಮ್ಮ ಕುಟುಂಬಕ್ಕಾಗಿಯಾದರೂ ದುಶ್ಚಟಗಳಿಂದ ದೂರ ಇರಬೇಕು ಎಂದು ಹೇಳಿದರು.
ಪರರ ಕಷ್ಟಕ್ಕೆ ಮಿಡಿಯಬೇಕು. ದಾನ, ಧರ್ಮ ಮಾಡಬೇಕು. ಗುರುವಿನ ವಾಣಿ ಆಲಿಸಲು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಜೀವನದಲ್ಲಿ ಗುರುವಿನ ಪಾತ್ರ ಬಹಳ ಮಹತ್ವದ್ದಾಗಿದೆ. ಗುರು ಭಕ್ತರನ್ನು ಉದ್ಧರಿಸುತ್ತಾನೆ. ಸನ್ಮಾರ್ಗ ತೋರುತ್ತಾನೆ. ಅಂತೆಯೇ ಸಂತರು ಗುರುವಿನ ಗುಲಾಮನಾಗುವ ತನಕ ದೊರೆಯಣ್ಣ ಮುಕ್ತಿ ಎಂದಿದ್ದಾರೆ ಎಂದು ನುಡಿದರು.
ಇದಕ್ಕೂ ಮೊದಲು ಗ್ರಾಮದ ಮುಖ್ಯ ರಸ್ತೆಯಿಂದ ವೇದಿಕೆ ಸ್ಥಳ ಹನುಮಾನ ದೇವಸ್ಥಾನದವರೆಗೆ ಬಸವಲಿಂಗ ಅವಧೂತರನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಲಾಯಿತ್ತು. ಕುಂಭ ಕಳಶ ಹೊತ್ತ ಮಹಿಳೆಯರು ಮೆರವಣಿಗೆಯ ಮೆರುಗು ಹೆಚ್ಚಿಸಿದವು. ಸಾವಿರಾರು ಜನ ಭಕ್ತಿ, ಶ್ರದ್ಧೆಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರುಗ್ರಾಮದ ಪ್ರಮುಖರಾದ ಸಂಜುಕುಮಾರ ಬುಕ್ಕಾ, ಚೆನ್ನು ಪಾಟೀಲ್, ಶಿವರಾಜ ಬೋಚರೆ, ಬಸಗೊಂಡಾ ಸಂಗಮೆ, ನಿರಂಜಪ್ಪ ನಮೋಶ, ಬಸವರಾಜ ಹೊಸದೊಡ್ಡೆ, ಸಂಜುಕುಮಾರ ಎಮ್ಮೆ, ಮಲ್ಲು ರೇವಗೊಂಡೆ ರಾಜು ಯಡ್ಡೆ, ಪ್ರತಾಪ ಗಂದಿಗುಡೆ, ಲೋಕೇಶ ಸೋಮಾ, ಗೋರಖ ಕುಂಬಾರ, ಸೋಮನಾಥ ಮಾಶೆಟ್ಟಿ, ಶಿವು ಉಮರರ್ಗೆ ಚಿಂಚೋಳಿ ಮೊದಲಾದವರು ಇದ್ದರು.