ತಂದೆ ತಾಯಿ ಋಣವನ್ನು ತೀರಿಸಲು ಸಾದ್ಯವಿಲ್ಲ: ರೆಹಮಾನ್ ಖಾನ್

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ನ.19: ಕಲಿತ ಶಾಲೆ, ಹುಟ್ಟಿದ ಊರು ಮತ್ತು ತಂದೆ ತಾಯಿಯ ಋಣವನ್ನು ನಾವೆಂದಿಗೂ ತೀರಿಸಲು ಸಾಧ್ಯವಿಲ್ಲ ಎಂದು ರಾಜ್ಯಸಭೆಯ ಮಾಜಿ ಉಪ ಸಭಾಪತಿ ಕೆ.ರೆಹಮಾನ್ ಖಾನ್ ಹೇಳಿದರು.
ಅವರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಈ ಹಿಂದೆ ತಾವು ರಾಜ್ಯಸಭಾ ಸದಸ್ಯರಾಗಿದ್ದಾಗ ನೀಡಿದ್ದ 75 ಲಕ್ಷ ರೂಗಳ ಅನುದಾನದಲ್ಲಿ ನಿರ್ಮಿತವಾದ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಅಸೂಹೆ ಎನ್ನುವುದು ಮಾನವನ ಸಹಜ ಗುಣ. ಆದರೆ ಜಗತ್ತಿನಲ್ಲಿ ಒಬ್ಬ ವ್ಯಕ್ತಿಯ ಯಶಸ್ಸನ್ನು ಕಂಡು ಅಸೂಹೆ ಪಡದೆ ಇರುವವರೆಂದರೆ ಅದು ತಂದೆ ತಾಯಿಗಳು ಮತ್ತು ವಿದ್ಯೆ ಕಲಿಸಿದ ಗುರುಗಳು ಮಾತ್ರ. ಮಗನ ಸಾಧನೆಗೆ ತಂದೆ ತಾಯಿಗಳು ಸಂಭ್ರಮಿಸಿದರೆ ಶಿಷ್ಯ ಎತ್ತರಕ್ಕೆ ಬೆಳೆದಷ್ಟೂ ಗುರುಗಳು ಸಂಭ್ರಮಿಸುತ್ತಾರೆ. ಈ ಇಬ್ಬರಿಗೆ ನಾವು ಸದಾ ಋಣಿಗಳಾಗಿರಬೇಕೆಂದ ಕೆ.ರೆಹಮಾನ್ ಖಾನ್ ವಿದ್ಯಾರ್ಥಿಗಳ ಕನಸನ್ನು ನನಸು ಮಾಡುವ ಮಾರ್ಗದರ್ಶಕ ಗುರು ಮಾತ್ರ ಮಕ್ಕಳು ಎಂದಿಗೂ ನಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಬಾರದು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಹೆಚ್.ಟಿ.ಮಂಜು ನಾನೂ ಕೂಡ ಇದೇ ಸಂಸ್ಥೆಯ ವಿದ್ಯಾರ್ಥಿಯಾಗಿದ್ದು ಸಂಸ್ಥೆ ಅಮೃತ ಮಹೋತ್ಸವ ಆಚರಣೆಯ ಹೊಸ್ತಿಲಿನಲ್ಲಿ ಬಂದು ನಿಂತಿದೆ. ಈ ಸಂಸ್ಥೆಗೆ ಅಗತ್ಯವಾದ ಮೂಲಭೂತ ಸೌಲಭ್ಯ ಕಲ್ಪಿಸಲು ನಾನು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆಂದರು. ರಾಜ್ಯ ಸಭೆಯ ಉಪ ಸಭಾಪತಿ ಕೆ.ರೆಹಮಾನ್ ಖಾನ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ ಶಾಸಕರು ಪಕ್ಷ ಯಾವುದೇ ಇರಲಿ ಗುಣಕ್ಕೆ ಮತ್ಸರ ಇರಬಾರದು. ರಾಜ್ಯ ವಿಧಾನ ಪರಿಷತ್ತಿನ ಸದಸ್ಯರಾಗಿ, ರಾಜ್ಯ ಸಭಾ ಸದಸ್ಯರಾಗಿ, ಕೇಂದ್ರದ ಮಾಜಿ ಸಚಿವರಾಗಿ ಮತ್ತು ರಾಜ್ಯಸಭೆಯ ಮಾಜಿ ಉಪ ಸಭಾಪತಿಗಳಾಗಿ ಎಷ್ಟೇ ಎತ್ತರಕ್ಕೆ ಬೆಳೆದರೂ ಕೆ.ರೆಹಮಾನ್ ಖಾನ್ ಹುಟ್ಟೂರಿನ ನಂಟು ಕಳೆದುಕೊಳ್ಳಲಿಲ್ಲ. ಕೆ.ರೆಹಮಾನ್ ಖಾನ್ ತಾಲೂಕಿನ ರಾಜಕೀಯ ಕ್ಷೇತ್ರದ ಕಿರೀಟ ಎಂದರು. ತಾವು ಓದಿದ ಶಾಲೆಗೆ ಕೇಳಿದಾಗಲೆಲ್ಲಾ ತಮ್ಮ ರಾಜ್ಯಸಭಾ ಸದಸ್ಯತ್ವದಲ್ಲಿ ಅಗತ್ಯ ಅನುದಾನ ನೀಡಿ ನಮಗೆ ಮಾರ್ಗದರ್ಶಿಯಾಗಿದ್ದಾರೆಂದ ಹೆಚ್.ಟಿ.ಮಂಜು ಸರ್ಕಾರಿ ನಶಾಲೆಗಳ ಉಳಿವಿಗೆ ಶಿಕ್ಷಕರು ಶ್ರಮಿಸಬೇಕು. ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ವಿದ್ಯಾರ್ಥಿಗಳು ತಾವು ಓದಿದ ಶಾಲೆ ಮತ್ತು ತಾವು ಹುಟ್ಟಿದ ಮನೆ ಮತ್ತು ಊರಿಗೆ ಹೆಸರು ತರುವಂತೆ ಕರೆ ನೀಡಿದರು.
ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಕರ್ನಾಟಕ ನಗರ ಮೂಲ ಸೌಕರ್ಯ ಮತ್ತು ಹಣಕಾಸು ನಿಗಮದ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ಬ್ಲಾಕ್ ಕಂಗ್ರೆಸ್ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್ ಸೇರಿದಂತೆ ಶಾಲೆಯ ಶಿಕ್ಷಕರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿದ್ದರು.