ಇದು ನನಗೆ ಪುನರ್ಜನ್ಮ: ಎಚ್‌ಡಿಕೆ

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿರವರು ಇಂದು ಬೆಳಿಗ್ಗೆ ಜಯನಗರದ ಅಪೋಲೋ ಆಸ್ಪತ್ರೆಯಿಂದ ಬಿಡುಗಡೆಯಾಗುವ ಮುನ್ನ ಪತ್ರಕರ್ತರೊಂದಿಗೆ ಮಾತನಾಡುತ್ತಿರುವುದು ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಮತ್ತು ಆಸ್ಪತ್ರೆಯ ತಜ್ಞ ವೈದ್ಯರು ಇದ್ದಾರೆ.

ಬೆಂಗಳೂರು,ಸೆ.೩:ಭಗವಂತ ನನಗೆ ಕೊಟ್ಟಿರುವ ೩ನೇ ಜನ್ಮವಿದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾವುಕರಾಗಿ ನುಡಿದರು. ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚೇತರಿಸಿಕೊಂಡು ಇಂದು ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೀವ್ರ ಜ್ವರ ಮತ್ತು ಲಘು ಪಾರ್ಶ್ವವಾಯುವಿನಿಂದ ಚೇತರಿಸಿಕೊಂಡಿದ್ದೇನೆ. ಭಗವಂತನ ದಯೆ, ತಂದೆ-ತಾಯಿಯ ಆಶೀರ್ವಾದದಿಂದ ಗುಣಮುಖನಾಗಿದ್ದೇನೆ.
ಕಳೆದ ಐದು ದಿನಗಳಿಂದ ಸ್ನೇಹಿತರಲ್ಲಿ ಭಯದ ವಾತಾವರಣವಿತ್ತು. ತಂದೆ ತಾಯಿ ಆಶೀರ್ವಾದದಿಂದ ಪುನರ್ಜನ್ಮ ಸಿಕ್ಕಿದೆ ಎಂದರು. ರಾಜಕೀಯ ಹೊರತಾಗಿ ಇಂದು ಮಾತನಾಡುತ್ತಿದ್ದೇನೆ ಯಾರೇ ಆಗಲಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಮ ಮಾಡಬೇಡಿ ಎಂದರು.
ಪ್ರತಿ ಕುಟುಂಬಗಳಲ್ಲೂ ಬಡವ-ಶ್ರೀಮಂತ ಯಾರೇ ಆಗಿರಲಿ ಆರೋಗ್ಯದ ಬಗ್ಗೆ ಕಾಳಜಿ ಇರಲಿ, ವೈಯಕ್ತಿಕವಾಗಿ ನನಗೆ ಇದು ಮೂರನೇ ಘಟನೆಯಾಗಿದೆ. ಭಗವಂತ ಕೊಟ್ಟಿರುವ ೩ನೇ ಜನ್ಮ ಇದು ಎಂದರು. ಪಾರ್ಶ್ವವಾಯು ಸೇರಿದಂತೆ ಯಾವುದೇ ಅನಾರೋಗ್ಯ ಕಾಡಿದಾಗ ಗೋಲ್ಡನ್ ಪಿರಿಯೆಡ್ ಬಗ್ಗೆ ಗಮನವಿರಲಿ. ನಾನು ಮೊನ್ನೆ ಸ್ವಲ್ಪ ನಿರ್ಲಕ್ಷ್ಯ ಮಾಡಿದ್ದರೂ ಸರಾಗವಾಗಿ ಮಾತನಾಡಲು ಆಗುತ್ತಿರಲಿಲ್ಲ. ವೈದ್ಯರ ಶ್ರಮದಿಂದ ಮತ್ತೆ ಮೊದಲಿನ ಸ್ಥಿತಿಗೆ ಬಂದಿದ್ದೇನೆ. ಹಣದ ಬಗ್ಗೆ ಚಿಂತನೆ ಮಾಡಬೇಡಿ ಮೊದಲು ಜೀವ ಉಳಿಸಿಕೊಳ್ಳಿ. ಅನಾರೋಗ್ಯದ ಲಕ್ಷಣಗಳು ಕಂಡು ಬಂದರೆ ವಿಳಂಬ ಮಾಡಬೇಡಿ ಎಲ್ಲರೂ ಜಾಗೃತರಾಗಿಬೇಕು ಎಂಬುದು ನನ್ನ ಮನವಿ ಎಂದರು.
ನಿಖಿಲ್ ಮಾತು
ಇದೇ ಸಂದರ್ಭದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಮಗನಾಗಿ ತಂದೆಯ ಬಳಿ ನನ್ನ ಒಂದು ಮನವಿ, ನೀವು ಜನರ ಆಸ್ತಿ, ಇನ್ನೂ ಹಲವು ವರ್ಷಗಳ ಕಾಲ ನಮ್ಮ ಜತೆ ಇರಬೇಕು. ಮುಂದಿನ ದಿನಗಳಲ್ಲಿ ಜೀವನ ಶೈಲಿ ಬದಲಿಸಿಕೊಳ್ಳಿ. ಸರಿಯಾಗಿ ಊಟ-ನಿದ್ರೆ ಮಾಡಿ ಎಂದು ಕುಮಾರಸ್ವಾಮಿ ಅವರಿಗೆ ಸುದ್ದಿಗೋಷ್ಢಿಯಲ್ಲೇ ಮನವಿ ಮಾಡಿ ಈಗಾಗಲೆ ಎಲ್ಲವನ್ನೂ ತಮ್ಮ ತಂದೆ ಹೇಳಿದ್ದಾರೆ. ನಾನು ಈ ದಿನ ಎಲ್ಲ ವೈದ್ಯರಿಗೆ ಧನ್ಯವಾದ ಹೇಳುತ್ತೇನೆ. ನಾವು ಸಹಜವಾಗಿ ಒತ್ತಡದಲ್ಲಿದ್ದೆವು. ಹಾಗಾಗಿ ಮಾಧ್ಯಮದವರ ಜತೆ ಮಾತನಾಡಿರಲಿಲ್ಲ. ತಂದೆ ಮಾಡಿದ ಒಳ್ಳೆಯ ಕೆಲಸಗಳು ಅವರನ್ನು ಕಾಪಾಡಿದೆ ಎಂದರು.