ತಂದೆ ತಾಯಿಗಿಂತಲೂ ಗುರುವಿನ ಸ್ಥಾನ ಮಿಗಿಲು-ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ  

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೨೬: ಮಕ್ಕಳ ಜೀವನ ರೂಪಿಸುವಲ್ಲಿ ತಂದೆ ತಾಯಿಗಳಿಗಿಂತಲೂ ಹೆಚ್ಚಿನ ಜವಬ್ದಾರಿ ಶಿಕ್ಷಕರದ್ದಾಗಿದೆ. ಬೋಧನೆ ಎನ್ನುವುದು ಕೇವಲ ವೃತ್ತಿಯಲ್ಲ, ಅದಕ್ಕೂ ಮಿಗಿಲಾದುದು. ಗುರುವಿನ ಮಾರ್ಗದರ್ಶನ ಇಲ್ಲದೆ ಯಾರೊಬ್ಬರು ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅಭಿಪ್ರಾಯಪಟ್ಟರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ತರಾಸು ರಂಗಮಂದಿರದಲ್ಲಿ  ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಶೈಕ್ಷಣಿಕ ಕಾರ್ಯಗಾರ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಭಾರತೀಯ ಸಂಸ್ಕøತಿಯಲ್ಲಿ ಮಾತಾ ಪಿತಾರ ಜೊತೆ ಗುರುವಿಗೂ ಮಹತ್ವದ ಸ್ಥಾನ ನೀಡಿದ್ದಾರೆ. ಸಮಾಜದಲ್ಲಿ ಬದಲಾವಣೆ ತರಲು ಶಿಕ್ಷಣ ಪ್ರಮುಖ ಸಾಧನ. ಚಿತ್ರದುರ್ಗ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದ ವೇಳೆಯಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡುವುದಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರ ನೀಡಿದ್ದೆ. ಅದರಂತೆ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಜಿಲ್ಲೆಯ ಶೈಕ್ಷಣಿಕ ಮಟ್ಟ ಸುಧಾರಿಸಲು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದೇನೆ ಎಂದರು.
ಚಿಕ್ಕಂದಿನಿಂದಲೂ ಮಕ್ಕಳಲ್ಲಿ ದೊಡ್ಡ ಕನಸುಗಳನ್ನು ಶಿಕ್ಷಕರು ಬಿತ್ತಬೇಕು. ನಾನು ಒಂದನೇ ತರಗತಿಯಲ್ಲಿ ಇದ್ದಾಗಲೇ, ನನ್ನ ಪ್ರಿಯ ಶಿಕ್ಷಕಿ ಪಾರ್ವತಿಯವರು ಐ.ಎ.ಎಸ್ ಅಧಿಕಾರಿಯಾಗುವಂತೆ ನನ್ನನ್ನು ಪ್ರೇರೇಪಿಸಿದ್ದರು. ಆ ಸಂದರ್ಭದಲ್ಲಿ ಐ.ಎ.ಎಸ್ ಅಂದರೆ ಏನು ಎಂಬುದು ನನಗೆ ಅರಿವಿರಲಿಲ್ಲ. ಹೆಚ್ಚಿನ ಹಂತ ಶಿಕ್ಷಣಕ್ಕೆ ಪಡೆಯುತ್ತಾ ಹೋದಹಾಗೆ ಐ.ಎ.ಎಸ್ ಬಗ್ಗೆ ತಿಳಿದುಕೊಂಡು, ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದೆ. ಐ.ಎ.ಎಸ್ ಅಧಿಕಾರಿಯಾದ ಕ್ಷಣದಲ್ಲಿ ನನಗೆ ಪ್ರೇರಣೆ ನೀಡಿದ ಶಿಕ್ಷಕಿ ಪಾರ್ವತಿಯವರನ್ನು ಭೇಟಿಯಾಗಿ ಆರ್ಶಿವಾದವನ್ನು ಸಹ ಪಡೆದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಮ್ಮ ಜೀವನ ಅನುಭವ ಹಂಚಿಕೊಂಡರು.ಶಿಕ್ಷಕರು ಮಕ್ಕಳ ಮನ ಮುಟ್ಟುವಂತೆ ಪಾಠಗಳನ್ನು ಮಾಡಬೇಕು. ಜೊತೆಗೆ ಬುದುಕಿನ ಶಿಕ್ಷಣವನ್ನು ನೀಡಬೇಕು. ಮಕ್ಕಳು ಶೈಕ್ಷಣಿವಾಗಿ ಹಿಂದುಳಿದರೆ, ಉತ್ತಮ ಸಾಧನೆ ಮಾಡಲು ವಿಫಲರಾದರೆ ತಂದೆ ತಾಯಿ ದುಃಖಿಸುತ್ತಾರೆ. ಇದೇ ಮಾದರಿ ಶಿಕ್ಷಕರಿಗೆ ತಾವು ಬೋದಿಸಿದ ವಿದ್ಯಾರ್ಥಿ ಪರೀಕ್ಷೆಯಲ್ಲಿ ಪೇಲ್ ಆದರೆ ನೋವ ಆಗಬೇಕು. ಮಕ್ಕಳು ತಮ್ಮ ವಿದ್ಯಾರ್ಥಿಗಳು ಎಂಬ ಮನೋಭಾವ ಇರಬೇಕು. ಎಸ್.ಎಸ್.ಎಲ್.ಸಿಯಲ್ಲಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಇದನ್ನು ಉಳಿಸಕೊಂಡು ಪ್ರತಿ ವರ್ಷವೂ ಜಿಲ್ಲೆಗೆ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಎಲ್ಲಾ ಶಿಕ್ಷಕರು ಪ್ರಯತ್ನ ಪಡೆಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.